ಚಿಕ್ಕಬಳ್ಳಾಪುರ: ಜೀವನದಲ್ಲಿ ಉತ್ತಮ ಭಾವನೆಗಳಿದ್ದಲ್ಲಿ ನಿರೀಕ್ಷೆಗೂ ಮೀರಿದ ಫಲ ಹೊಂದಲು ಸಾಧ್ಯವಿದೆ. ಸ್ವಸಹಾಯ ಸಂಘಗಳ ಸ್ಥಾಪನೆಯಿಂದ ಮಹಿಳೆಯರು ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯವಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ನುಡಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಬೆಳ್ಳೂಟಿ ಗ್ರಾಮದ ಎಸ್ಎಲ್ವಿ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ವತಿಯಿಂದ ಸ್ವಸಹಾಯ ಸಂಘಗಳ ಸಮಾವೇಶವನ್ನು ಏರ್ಪಡಿಸಲಾಗಿತ್ತು. ಇದೇ ವೇಳೆ ಮಾತನಾಡಿದ ವೀರೇಂದ್ರ ಹೆಗ್ಗಡೆಯವರು ಮಹಿಳೆಯರು ಎಲ್ಲಾ ರಂಗಗಳಲ್ಲಿ ಸಾಧನೆ ಮಾಡಿ ದೇಶದ ಅಭಿವೃದ್ಧಿಗೆ ತಮ್ಮದೇ ಆದ ಸೇವೆ ಸಲ್ಲಿಸುತ್ತಿದ್ದಾರೆ. ಜನರು ದುಶ್ಚಟಗಳಿಗೆ ದಾಸರಾಗದಂತೆ ಸಲಹೆ ನೀಡಿದರು.
ಬಳಿಕ ಮಾತನಾಡಿದ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಅವರು ಪ್ರಧಾನಿ ನರೇಂದ್ರ ಮೋದಿಯವರು ಹೆಗ್ಗಡೆಯವರ 50 ವರ್ಷಗಳ ಸಾಧನೆಯನ್ನು ಗುರುತಿಸಿ ದೇಶದ ಸೇವೆ ಮಾಡಲು ರಾಜ್ಯಸಭೆಯ ಸದಸ್ಯರಾಗಿ ನೇಮಕ ಮಾಡಿದ್ದಾರೆ. ಇದರಿಂದ ರಾಜ್ಯಸಭೆಯ ಘನತೆ ಹೆಚ್ಚಾಗಲಿದೆ. ರಾಜ್ಯದಲ್ಲಿ ನಡೆದಾಡುವ ಹಾಗೂ ಮಾತನಾಡುವ ದೇವರೆಂದರೆ ವೀರೇಂದ್ರ ಹೆಗ್ಗಡೆ ಹೆಗ್ಗೆಡೆಯವರು ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್, ಕೋಲಾರ ಲೋಕಸಭಾ ಕ್ಷೇತ್ರದ ಸಂಸದ ಮುನಿಸ್ವಾಮಿ, ಜಿಲ್ಲಾಧಿಕಾರಿ ಆರ್.ಲತಾ, ಎಸ್ಪಿ ನಾಗೇಶ್, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಭಾಗಿಯಾಗಿದ್ದರು.
ಇದನ್ನೂ ಓದಿ: ರಾಜ್ಯಸಭೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಆಯ್ಕೆ ಸಂತಸ ತಂದಿದೆ: ಡಿಕೆಶಿ