ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮತ ಎಣಿಕೆ ಮುಗಿದಿದ್ದು, ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ಭರ್ಜರಿ ಗೆಲುವು ಸಾಧಿಸಿದ್ದಾರೆ. ಇನ್ನು ಹ್ಯಾಟ್ರಿಕ್ ಕನಸಿನಲ್ಲಿದ್ದ ಕಾಂಗ್ರೆಸ್ ಅಭ್ಯರ್ಥಿ ವೀರಪ್ಪ ಮೊಯ್ಲಿಗೆ ಇದರಿಂದ ಭಾರೀ ಮುಖಭಂಗ ಎದುರಾಗಿದೆ.
ಮತ ಎಣಿಕೆ ಕೇಂದ್ರದಿಂದ ಹೊರ ನಡೆದ ವೀರಪ್ಪ ಮೊಯ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಬಚ್ಚೇಗೌಡರು ಗೆದ್ದಿದ್ದಕ್ಕೆ ಅಭಿನಂದನೆಗಳು ಹಾಗೂ ಈ ಚುನಾವಣೆಯಲ್ಲಿ ನಾನು ಸೋತಿದ್ದೇನೆ ಎಂದು ಬೇರೆ ಏನೂ ಮಾತನಾಡದೆ ಅಲ್ಲಿಂದ ಹೊರಟರು. ಇನ್ನು ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಮೊದಲ ಬಾರಿಗೆ ಗೆಲುವಿನ ನಗೆ ಬೀರಿದ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೆಗೌಡ ಈ ಮೂಲಕ ಕಾಂಗ್ರೆಸ್ ಭದ್ರಕೋಟೆಯನ್ನು ಕೆಡವಿ ಕಮಲ ಅರಳಿಸಿದ್ದಾರೆ.
ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಚ್ಚೇಗೌಡ ಅವರು ವೀರಪ್ಪ ಮೊಯ್ಲಿ ವಿರುದ್ಧ 9500 ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. ಆದರೆ ಈ ಬಾರಿ ಒಂದೂವರೆ ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದಾರೆ.