ಚಿಕ್ಕಬಳ್ಳಾಪುರ: ಬರಪೀಡಿತ ಜಿಲ್ಲೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಗೂ ಮುನ್ನ ನಡೆದಿದ್ದ ರಾಜಕೀಯ ಅಭಿಪ್ರಾಯಗಳು ಕೊನೆಗೂ ನಿಜವಾಗಿವೆ. ಅಂದುಕೊಂಡಂತೆ ಮೈತ್ರಿ ಅಭ್ಯರ್ಥಿ ಎಂ.ವೀರಪ್ಪ ಮೊಯ್ಲಿಗೆ ಬಿಗ್ ಶಾಕ್ ಸಿಕ್ಕಿದೆ. ಈ ಮೂಲಕ ಕಳೆದ ಬಾರಿಯೂ ಸೋಲುಂಡ ಬಿಜೆಪಿಯ ಬಿ.ಎನ್.ಬಚ್ಚೇಗೌಡರ ಮೊಗದಲ್ಲಿ ಈ ಬಾರಿ ಗೆಲುವಿನ ಮಂದಹಾಸ ಮೂಡಿದೆೆ. ಅವರ ಎಲ್ಲಾ ರಾಜಕೀಯ ತಂತ್ರಗಾರಿಕೆಗಳು ಫಲ ನೀಡಿವೆ.
ಪ್ರಧಾನಿ ನರೇಂದ್ರ ಮೋದಿ ಅವರ ಹವಾ 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಭಾರಿ ಗೆಲುವು ತಂದುಕೊಟ್ಟಿತ್ತು. ಆದ್ರೆ, ನಮೋ ಅಲೆ ಕರ್ನಾಟಕದ ಅರ್ಧದಷ್ಟು ಕಡೆ ಕೈಕೊಟ್ಟಿರುವುದು ಅಷ್ಟೇ ಸತ್ಯ. ಮೋದಿ ಅವರ ವರ್ಚಸ್ಸಿನ ಹೊರತಾಗಿಯೂ ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಂ.ವೀರಪ್ಪ ಮೊಯ್ಲಿ ಜಯಭೇರಿ ಬಾರಿಸಿದ್ದರು.ಆದ್ರೆ ಈ ಬಾರಿ ಮೊಯ್ಲಿ ಅವರಿಗೆ ಬಚ್ಚೇಗೌಡ್ರು ಸೋಲಿನ ರುಚಿ ತೋರಿಸಿದ್ದಾರೆ.
ಈ ಬಾರಿ ತಮ್ಮ ಸಮುದಾಯದ ಮತಗಳನ್ನು ಸೆಳೆಯುವಲ್ಲಿ ಬಚ್ಚೇಗೌಡರು ಸಂಪೂರ್ಣವಾಗಿ ಯಶಸ್ವಿಯಾಗಿದ್ದಾರೆ ಎನ್ನಲಾಗ್ತಿದೆ. 2014ರಲ್ಲಿ ಈ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಸಿಎಂ ಎಚ್.ಡಿ ಕುಮಾರಸ್ವಾಮಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದರು. ಹೀಗಾಗಿ ಒಕ್ಕಲಿಗರ ಮತಗಳು ವಿಭಜನೆಯಾಗಿದ್ದವು. ಪರಿಣಾಮ ಬಿಜೆಪಿ ಅಭ್ಯರ್ಥಿಯಾಗಿದ್ದ ಇವರು ಸೋಲು ಕಾಣಬೇಕಾಯಿತು. ಆದರೆ, ಈ ಬಾರಿ ಸಮುದಾಯದ ಜನರು ಬಚ್ಚೇಗೌಡರ ಪರ ಹೆಚ್ಚು ಒಲವು ತೋರಿದ್ದು, ಬಲಿಜ ಸಮುದಾಯದ ಮತಗಳು ಬಿಜೆಪಿಗೆ ಬಿದ್ದಿವೆ ಅಂತ ಹೇಳಲಾಗ್ತಿದೆ.
ಚಿಕ್ಕಬಳ್ಳಾಪುರದ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿಗೆ ಕೇವಲ ಒಬ್ಬ ಶಾಸಕರಿದ್ದಾರೆ. ಹಾಗಿದ್ದೂ ಬಚ್ಚೇಗೌಡರು ಜಯಗಳಿಸಿದ್ದು ವಿಶೇಷವಾಗಿದೆ.