ಗೌರಿಬಿದನೂರು: ತಾಲೂಕಿನಾದ್ಯಂತ ಇಂದು ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯ್ತು. ತಾಲೂಕಿನ ವಿವಿಧ ಹಳ್ಳಿಗಳ ಜನರು ಹೂವಿನ ಪಲ್ಲಕ್ಕಿಯಲ್ಲಿ ವಾಲ್ಮೀಕಿ ಭಾವಚಿತ್ರವನ್ನು ಇಟ್ಟು ನಗರದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು.
ಮೆರವಣಿಗೆಯಲ್ಲಿ ತಮಟೆ ಹಾಗೂ ವಾದ್ಯದ ಸದ್ದಿಗೆ ಯುವಕರು ದಾರಿಯುದ್ದಕ್ಕೂ ಕುಣಿದು ಕುಪ್ಪಳಿಸಿದರು. ಬಳಿಕ ನಡೆದ ಕಾರ್ಯಕ್ರಮದಲ್ಲಿ ಮಾಜಿ ಕೃಷಿ ಸಚಿವ ಹಾಗೂ ಹಾಲಿ ಶಾಸಕ ಎನ್ ಹೆಚ್ ಶಿವಶಂಕರರೆಡ್ಡಿ ಮಾತನಾಡಿ, ವಾಲ್ಮೀಕಿ ಸಮುದಾಯ ಮಹಾನ್ ವ್ಯಕ್ತಿಯ ಸಮುದಾಯವಾಗಿದ್ದು, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದೆ. ಈ ಹಿನ್ನೆಲೆಯಲ್ಲಿ ಸಮುದಾಯದ ಏಳಿಗೆಗಾಗಿ ಸರ್ಕಾರಗಳು ಶ್ರಮಿಸುತ್ತಿವೆ ಎಂದರು.
ಸಮುದಾಯದ ಹಿರಿಯ ಮುಖಂಡ ಅಶೋಕ್ ಕುಮಾರ್ ಮಾತನಾಡಿ, ಮಹರ್ಷಿ ವಾಲ್ಮೀಕಿಯವರ ಆದರ್ಶದಂತೆ, ನಾವೆಲ್ಲರೂ ದುಷ್ಚಟಗಳನ್ನು ಬಿಟ್ಟು ಬದಲಾಗಬೇಕು. ನಮ್ಮ ಸಮುದಾಯದ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುವ ಮೂಲಕ ಉನ್ನತ ಸ್ಥಾನದಲ್ಲಿ ಇರಲು ಸಾಧ್ಯವಾಗುತ್ತದೆ ಎಂದರು.