ಚಿಕ್ಕಬಳ್ಳಾಪುರ : ದೆಹಲಿಯ ತಬ್ಲೀಗ್ ಜಮಾತ್‌ನಲ್ಲಿರುವ ಅಲಾಮಿ ಮರ್ಕಜ್ ಬಂಗ್ಲೇವಾಲಿ ಮಸೀದಿಯಲ್ಲಿ ಮಾರ್ಚ್ 13ರಿಂದ 15ರವರೆಗೆ ನಡೆದ ಕಾರ್ಯಕ್ರಮದ ವೇಳೆ ಅದೇ ಮಸೀದಿಯಲ್ಲಿ ತಂಗಿದ್ದ ಚಿಕ್ಕಬಳ್ಳಾಪುರದ ದಂಪತಿಯನ್ನ ಕ್ವಾರೆಂಟೈನ್ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಸಭೆ ನಡೆದ ದಿನ ಪ್ರವಾಸಕ್ಕೆ ತೆರಳಿದ್ದ ದಂಪತಿ ಮಸೀದಿ ಕೋಣೆಯಲ್ಲಿ ವಾಸ್ತವ್ಯ ಹೂಡಿದ್ದರಂತೆ. ಈ ಹಿನ್ನೆಲೆ ನಗರದ ಆಸ್ಪತ್ರೆಯಲ್ಲಿ ಕ್ವಾರೆಂಟೈನ್ ಮಾಡಲಾಗುತ್ತಿದೆ.
ಜಿಲ್ಲಾಡಳಿತದ ಕೈ ಸೇರಿದ್ದ 7 ಜನರ ಲಿಸ್ಟ್ನಲ್ಲಿ, ಇಬ್ಬರು ಮಾತ್ರ ಮಸೀದಿ ಕೋಣೆಯಲ್ಲಿ ತಂಗಿದ್ದರು. ಉಳಿದವರು ದೆಹಲಿಗೆ ಜಿಲ್ಲೆಯಿಂದ ನಿಯೋಜಿತ ಕಾರ್ಯದ ನಿಮಿತ್ತ ಹೋಗಿದ್ದರು ಎಂದು ತಿಳಿದು ಬಂದಿದೆ. ಇನ್ನೂ ಯಾರಾದರೂ ಇದ್ದಾರೆಯೇ ಎನ್ನುವುದರ ಕುರಿತು ಜಿಲ್ಲಾ ಎಸ್‌ಪಿ ಜಿ ಕೆ ಮಿಥುನ್ ನೇತೃತ್ವದಲ್ಲಿ ಶೋಧನಾ ಕಾರ್ಯ ನಡೆಯುತ್ತಿದೆ.
ಮಲೇಷ್ಯಾ, ಇಂಡೊನೇಷ್ಯಾ, ಇಂಗ್ಲೆಂಡ್, ಕುವೈತ್, ಸೌದಿ ಅರೇಬಿಯಾ ಸೇರಿ ವಿವಿಧ ದೇಶಗಳ ಜನರು ಭಾಗವಹಿಸಿದ್ದ ಸಭೆಯಲ್ಲಿ ಭಾರತದ ವಿವಿಧ ರಾಜ್ಯಗಳ ಸಾವಿರಾರು ಮಂದಿ ಕೂಡ ಪಾಲ್ಗೊಂಡಿದ್ದರು. ಇಲ್ಲಿಗೆ ಭೇಟಿ ನೀಡಿದ್ದ ದೆಹಲಿ ನಿವಾಸಿಗಳ ಪೈಕಿ 24 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. 10 ಜನರು ಕೋವಿಡ್‌ನಿಂದಾಗಿ ಮೃತಪಟ್ಟಿದ್ದಾರೆ. ತೆಲಂಗಾಣದ 6, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಹಾಗೂ ಜಮ್ಮು ಮತ್ತು ಕಾಶ್ಮೀರದ ತಲಾ ಒಬ್ಬರು ಮೃತಪಟ್ಟಿದ್ದಾರೆ. ಇವರೆಲ್ಲಾ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಎಂದು ಹೇಳಲಾಗುತ್ತಿದೆ.