ಚಿಕ್ಕಬಳ್ಳಾಪುರ: ಸ್ಕಾರ್ಪಿಯೋ ವಾಹನದಲ್ಲಿ ಸಾಗಿಸುತ್ತಿದ್ದ 32 ಲಕ್ಷ ಮೌಲ್ಯದ ರಕ್ತ ಚಂದನವನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಆಂಧ್ರಪ್ರದೇಶದದಿಂದ ಬೆಂಗಳೂರಿನ ಕಡೆಗೆ ಸ್ಕಾರ್ಪಿಯೋ ವಾಹನದಲ್ಲಿ ಸಾಗಿಸುತ್ತಿದ್ದ ಸುಮಾರು 800 ಕೆ.ಜಿ.ಯ 20ಕ್ಕೂ ಹೆಚ್ಚು ರಕ್ತ ಚಂದನದ ದಿಮ್ಮಿಗಳನ್ನು, ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಸುಮಾರು 32 ಲಕ್ಷಕ್ಕೂ ಅಧಿಕ ಮೌಲ್ಯದ ದಿಮ್ಮಿಗಳು ಹಾಗೂ ಸ್ಕಾರ್ಪಿಯೋ ವಾಹನ ವಶಕ್ಕೆ ಪಡೆದು ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳಾದ ತನ್ವೀರ್ ಮತ್ತು ಸಿಬ್ಬಂದಿ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಬರುತ್ತಿದ್ದ ವೇಳೆ ಸ್ಕಾರ್ಪಿಯೋ ವಾಹನ ನಿಲ್ಲಿಸದೇ ಪರಾರಿಯಾಗಲು ಯತ್ನಿಸಿದ್ದು, ಈ ವೇಳೆ ಆರೋಪಿಗಳಿದ್ದ ವಾಹನಕ್ಕೆ ಅಧಿಕಾರಿಗಳು ತಮ್ಮ ವಾಹನದ ಮೂಲಕ ಡಿಕ್ಕಿ ಹೊಡೆದು ನಿಲ್ಲಿಸಿದ್ದಾರೆ.
ವಾಹನ ಚಲಾಯಿಸುತ್ತಿದ್ದ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಮದ್ದರೆಡ್ಡಿ ನಾಯಕ್(25) ಕಾಲು ಮುರಿದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮತ್ತೊರ್ವ ಆರೋಪಿ ಬಾಷಾನನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.