ಚಿಕ್ಕಬಳ್ಳಾಪುರ: ಪೊಲೀಸರಂದ್ರೆ ಬೈಕ್ ಸವಾರರಿಗೆ ಭಯವೋ ಭಯ. ಅದು ಇದು ಕೇಳಿ ಫೈನ್ ಹಾಕಿಬಿಡ್ತಾರೋ ಅಂತಾ. ಆದ್ರೆ, ಇಲ್ಲಿಬ್ಬರು ಪೊಲೀಸರು ಹೆಲ್ಮೆಟ್ ಧರಿಸದೆ ಬೈಕ್ ಸವಾರಿ ಮಾಡಿದ್ದಾರೆ. ಇದನ್ನು ಕಂಡ ಸಾರ್ವಜನಿಕರು ಸಖತ್ ಆಗೇ ಕ್ಲಾಸ್ ತೆಗೆದುಕೊಂಡಿದ್ದಾರೆ.
ಹೆಲ್ಮೆಟ್ ಧರಿಸದೆ ಬರುತ್ತಿದ್ದ ಪೊಲೀಸರ ಬೈಕ್ನ್ನ ಅಡ್ಡಗಟ್ಟಿದ ಸಾರ್ವಜನಿಕರು, ಪೊಲೀಸರಿಗೆ ಹೆಲ್ಮೆಟ್ ಎಲ್ಲಿ ಅಂತ ಪ್ರಶ್ನೆ ಮಾಡಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ವ್ಯಾಪ್ತಿಯಲ್ಲಿ ನಡೆದಿದೆ.
ಕಳೆದ ಎರಡು ದಿನಗಳ ಹಿಂದೆ ಶಿಡ್ಲಘಟ್ಟ-ಚಿಂತಾಮಣಿ ಮಾರ್ಗದ ಪಿಂಡಿಪಾಪನಹಳ್ಳಿ ರಸ್ತೆಯಲ್ಲಿ ಸಂಚಾರಿ ನಿಯಮಗಳನ್ನ ಉಲ್ಲಂಘಿಸಿ ಸಂಚರಿಸುತ್ತಿದ್ದ ವಾಹನ ಸವಾರರಿಗೆ ಪೊಲೀಸರು ದಂಡ ವಿಧಿಸಿದ್ದಾರೆ. ಈ ವೇಳೆ ಹೆಲ್ಮೆಟ್ ಧರಿಸದೆ ಬಂದ ಸ್ಥಳೀಯ ಕಾಂಗ್ರೆಸ್ ಮುಖಂಡ ಪಂಚಾಕ್ಷರಿ ರೆಡ್ಡಿಗೂ ಕೂಡ ದಂಡ ವಿಧಿಸಿದ್ದರು. ಇಷ್ಟಲ್ಲದೆ ಆ ವೇಳೆ ಪೊಲೀಸರು ರೆಡ್ಡಿಯವರಿಗೆ ಅವಾಚ್ಯ ಶಬ್ದಗಳಲ್ಲಿ ನಿಂದಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಈ ಕಾರಣಕ್ಕಾಗಿ ಪಂಚಾಕ್ಷರಿ ರೆಡ್ಡಿ ಬೆಂಬಲಿಗರು ರಸ್ತೆ ತಡೆ ನಡೆಸಿ ರಸ್ತೆ ಬಂದ್ ಮಾಡಿದ್ದಾರೆ. ಈ ವಿಷಯ ತಿಳಿದು ಬಂದೋಬಸ್ತ್ಗಾಗಿ ಸ್ಥಳಕ್ಕೆ ಹೆಲ್ಮೆಟ್ ಇಲ್ಲದೆ ಬೈಕ್ನಲ್ಲಿ ಬಂದ ಇಬ್ಬರು ಪೊಲೀಸರನ್ನ ಕಂಡ ಸಾರ್ವಜನಿಕರು ಸಖತ್ ಆಗೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ಘಟನೆಯ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದ್ದು, ಎಲ್ಲಾ ಕಡೆ ವೈರಲ್ ಆಗಿದೆ.