ಚಿಕ್ಕಬಳ್ಳಾಪುರ: ಕೋರ್ಟ್‌ನಲ್ಲಿ ವಿಚ್ಛೇದನಕ್ಕೆಂದು ಅರ್ಜಿ ಹಾಕಿದ್ದ ಮೂರು ಜೋಡಿಗಳನ್ನು ನ್ಯಾಯಮೂರ್ತಿಗಳು ಮತ್ತೆ ಒಂದುಗೂಡಿಸಿದ ಪ್ರಸಂಗ ನಗರದಲ್ಲಿ ನಡೆದ ಲೋಕ ಅದಾಲತ್ನಲ್ಲಿ ಶನಿವಾರ ನಡೆದಿದೆ.
ವಿಚ್ಛೇದನಕ್ಕೆಂದು ಆಶಾ-ವಿನೋದ್ ಕುಮಾರ್, ದೀಪಾ-ರಮೇಶ್, ಉಷಾ ಜಿ-ಮುನಿರಾಜು ಎಂಬುವವರು ಲೋಕ ಅದಾಲತ್ ಕಾರ್ಯಕ್ರಮಕ್ಕೆ ಬಂದಿದ್ದರು. ವಿಚಾರಣೆಯನ್ನು ನಡೆಸಿದ ನ್ಯಾ.ಲಕ್ಷ್ಮೀಕಾಂತ್ ಜೆ.ಮಿಸ್ಕಿನ್ ಹಾಗೂ ನ್ಯಾ.ವಿವೇಕಾನಂದ ಪಂಡಿತ್ ಹಾಗೂ ನ್ಯಾ.ಅರುಣಾಕುಮಾರಿ ಅವರು ಜೋಡಿಗಳ ಬಳಿ ಮಾಹಿತಿ ಪಡೆದು ಬುದ್ದಿವಾದ ಹೇಳಿದರು. ಇದರಿಂದ ಮನ ಬದಲಿಸಿದ ಮೂವರು ದಂಪತಿಗಳು ನ್ಯಾಯಾಧೀಶರ ಸಮ್ಮುಖದಲ್ಲೇ ಮತ್ತೆ ಹಾರ ಬದಲಿಸಿಕೊಳ್ಳುವುದರ ಮೂಲಕ ಒಂದಾದರು. ಅಲ್ಲದೇ, ಸಿಹಿ ತಿನಿಸಿ ನಗು ಬೀರಿದರು.
ದಂಪತಿಗಳ ಹಿನ್ನೆಲೆ: ಗೌರಿಬಿದನೂರು ತಾಲೂಕಿನ ದೇವರಕೊಂಡಹಳ್ಳಿ ಗ್ರಾಮದ ಮುನಿರಾಜು ಹಾಗೂ ಬೆಂಗಳೂರು ಮೂಲದ ಉಷಾ ಜಿ ಹಾಗೂ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದರು. ಇಬ್ಬರ ಮಧ್ಯೆ ಉಂಟಾದ ಮೈನಸ್ಸಿನಿಂದ ವಿಚ್ಛೇದನಕ್ಕೆ ಪತ್ನಿ ಉಷಾ ಅರ್ಜಿ ಸಲ್ಲಿಸಿದ್ದರು.
ಶಿಡ್ಲಘಟ್ಟ ತಾಲೂಕಿನ ದೇವಗಾನಹಳ್ಳಿ ನಿವಾಸಿ ರಮೇಶ ಹಾಗೂ ಚಿಕ್ಕಬಳ್ಳಾಪುರ ತಾಲೂಕಿನ ಅರಸನಹಳ್ಳಿ ನಿವಾಸಿ ದೀಪಾ ಮದುವೆಯಾಗಿ 18 ವರ್ಷಗಳು ಕಳೆದಿದ್ದು, ಇಬ್ಬರು ಮಕ್ಕಳು ಸಹ ಇದ್ದಾರೆ. ಆದರೆ, ಪ್ರತಿನಿತ್ಯ ಉಂಟಾಗುತ್ತಿದ್ದ ಗಲಾಟೆಯಿಂದ ಪತ್ನಿ ತನಗೆ ವಿಚ್ಛೇದನ ಬೇಕೆಂದು ನ್ಯಾಯಾಲಯದ ಮೊರೆ ಹೋಗಿದ್ದರು.
ಗುಡಿಬಂಡೆಯ ಆಶಾ ಹಾಗೂ ವಿನೋದ ಕುಮಾರ್ ದಂಪತಿ ಕೂಡ ವಿಚ್ಛೇದನಕ್ಕಾಗಿ ಕೋರ್ಟ್ ಮೊರೆ ಹೋಗಿದ್ದರು. ಆದರೆ , ಈ ಮೂವರು ದಂಪತಿಗಳನ್ನು ಮನವೊಲಿಸಿದ ನ್ಯಾಯಾಧೀಶರು ನ್ಯಾಯಾಲಯದಲ್ಲೇ ಮತ್ತೆ ಒಂದು ಮಾಡಿದರು. ನ್ಯಾಯಾಧೀಶರ ಈ ಕಾರ್ಯಕ್ಕೆ ಕುಟುಂಬಸ್ಥರು ಹಾಗೂ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: ಕೋರ್ಟ್ ಆವರಣದಲ್ಲೇ ಚಾಕುವಿನಿಂದ ಪತ್ನಿಯ ಕತ್ತು ಕೊಯ್ದ ಪತಿ.. ಹಾಸನದಲ್ಲಿ ಹರಿದ ನೆತ್ತರು