ಚಿಕ್ಕಬಳ್ಳಾಪುರ: ಹಿರೇನಾಗವಲ್ಲಿ ಬಳಿ ನಡೆದ ಸ್ಫೋಟ ಪ್ರಕರಣ ಸಂಬಂಧ ಸರ್ಕಾರ ಇಬ್ಬರು ತಳಮಟ್ಟದ ಪೊಲೀಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದೆ. ಹಾಗಾದರೆ ಹಿರಿಯ ಅಧಿಕಾರಿಗಳ ತಪ್ಪೇ ಇಲ್ವಾ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಪ್ರಶ್ನಿಸಿದ್ದಾರೆ.
ಹಿರೇನಾಗವಲ್ಲಿಯಲ್ಲಿ ಸ್ಫೋಟದ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಗುಬ್ಬಿ ಮೇಲೆ ಬ್ರಹ್ಮಾಸ್ತ್ರವೆಂಬಂತೆ ತಳಮಟ್ಟದ ಪೊಲೀಸ್ ಅಧಿಕಾರಿಗಳ ಮೇಲೆ ಸರ್ಕಾರ ತನ್ನ ಅಸ್ತ್ರವನ್ನು ಪ್ರಯೋಗಿಸಿದೆ. ಕೇವಲ ಒಬ್ಬ ಇನ್ಸ್‌ಪೆಕ್ಟರ್, ಪಿಎಸ್ಐನ ಸಸ್ಪೆಂಡ್ ಮಾಡಿರೋದು ಸರಿಯಲ್ಲ. ಅಕ್ರಮವಾಗಿ ಸ್ಫೋಟಕಗಳು ಇಲ್ಲಿಗೆ ತಲುಪಿವೆ ಅಂದರೆ ಯಾರೆಲ್ಲಾ ಇದರಲ್ಲಿ ಭಾಗಿಯಾಗಿರುತ್ತಾರೆ ಗೊತ್ತಿದೆ ಅಲ್ವಾ ಎಂದು ಸರ್ಕಾರವನ್ನು ಪ್ರಶ್ನಿಸಿದರು.
ಜಿಲ್ಲಾಧಿಕಾರಿ, ಎಸ್ಪಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು, ಸಾರಿಗೆ ಇಲಾಖೆ ಅಧಿಕಾರಿಗಳು, ರಾಜ್ಯಮಟ್ಟದ ಹಿರಿಯ ಅಧಿಕಾರಿಗಳು ಇದರಲ್ಲಿ ಇದ್ದಾರೆ. ಅಂತಹ ಪ್ರಭಾವಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಿತ್ತು. ಮುಂದಿನ ದಿನಗಳಲ್ಲಿ ಸದನದಲ್ಲಿ ಇದರ ಬಗ್ಗೆ ಚರ್ಚೆ ಮಾಡುತ್ತೇನೆ ಎಂದರು.