ಚಿಕ್ಕಬಳ್ಳಾಪುರ : ಕಟ್ಟಡದ ಉದ್ಘಾಟನೆಗೆಂದು ಬಂದ ಅಬಕಾರಿ ಸಚಿವರಿಗೆ ಗ್ರಾಮಸ್ಥರು ತಡೆಯೊಡ್ಡಿದ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ಲು ಬಳಿ ನಡೆದಿದೆ.
ತಾಲೂಕಿನ ಮಂಡಿಕಲ್ ಬಳಿ ಐಟಿಐ ಕಾಲೇಜು ಕಟ್ಟಡದ ಉದ್ಘಾಟನೆಗೆ ಅಬಕಾರಿ ಸಚಿವ ನಾಗೇಶ್ ಹಾಜರಾಗಿದ್ದು, ಎಲ್ಲಾ ತಯಾರಿ ನಡೆಸಿಕೊಂಡಿದ್ದರು. ಆದರೆ ಸ್ಥಳೀಯ ಅನರ್ಹ ಶಾಸಕ ಸುಧಾಕರ್ಗೆ ಆಹ್ವಾನ ನೀಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ, ಕೆಲ ಕಾಲ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದರು.
ಮಂಡಿಕಲ್ಲು ಗ್ರಾಮದಲ್ಲಿನ ಐಟಿಐ ಕಾಲೇಜು ಉದ್ಘಾಟನೆಗೆ ಸ್ಥಳೀಯ ಗ್ರಾ.ಪಂ ಸದಸ್ಯ ಹಾಗೂ ಆನರ್ಹ ಶಾಸಕರಿಗೆ ಆಹ್ವಾನ ಇಲ್ಲದ ಕಾರಣ ಸುಧಾಕರ್ ಬೆಂಬಲಿಗರು ಗುತ್ತಿಗೆದಾರ ಹಾಗೂ ಕಾಲೇಜು ಪ್ರಾಂಶುಪಾಲರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಕಾರ್ಯಕ್ರಮಕ್ಕೆ ಅನರ್ಹ ಶಾಸಕ ಸುಧಾಕರ್ ಹಾಗೂ ಸಚಿವರು ಬಂದ ನಂತರವೇ ಬೆಂಬಲಿಗರು ಶಾಂತಗೊಂಡು ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟರು. ನಂತರ ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.