ಚಿಕ್ಕಬಳ್ಳಾಪುರ : ಎಸಿಬಿ ಡಿವೈಎಸ್‌ಪಿ ಹೆಸರಲ್ಲಿ ಜಿಪಂ ಅಧಿಕಾರಿಗಳಿಗೆ ಹಣ ಕೊಡುವಂತೆ ಬೇಡಿಕೆ ಇಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಎಸಿಬಿ ಅಧಿಕಾರಿಗಳ ಹೆಸರಲ್ಲಿ ಹಣಕ್ಕೆ ಪೀಡಿಸುತ್ತಿರುವ ವ್ಯಕ್ತಿಯ ಪತ್ತೆಗೆ ಜಿಪಂ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಕರೆ ಮಾಡಿರುವ ಅಪರಿಚಿತ ವ್ಯಕ್ತಿ, ನಾನು ಎಸಿಬಿ ಡಿವೈಎಸ್‌ಪಿ ಪ್ರವೀಣ್‌ಕುಮಾರ್ ಚಿಕ್ಕಬಳ್ಳಾಪುರ ಎಂದು ಹೇಳಿಕೊ೦ಡು ಜಿಲ್ಲಾ ಪಂಚಾಯತ್‌ನಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳಿಗೆ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ.
ಜಿಪಂ ಉಪ ಕಾರ್ಯದರ್ಶಿ ಬಿ. ಶಿವಕುಮಾರ್ ಎಂಬುವರಿಗೆ ಕರೆ ಮಾಡಿರುವ ಅಪರಿಚಿತ ವ್ಯಕ್ತಿ, ನಿಮ್ಮಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಇಒಗೆ ಕರೆ ಮಾಡುತ್ತಿದ್ದೇನೆ. ಅವರು ತೆಗೆಯುತ್ತಿಲ್ಲ. ನೀವು ಅವರಿಗೆ ಹೇಳಿ ಕೂಡಲೇ ಕರೆ ಮಾಡುವಂತೆ ತಿಳಿಸಿ ಎಂದು ಹೇಳಿದ್ದಾನೆ. ಸಿಇಒ ಮೇಲೆ ಎಸಿಬಿ ರೈಡ್ ಆಗುತ್ತದೆ, ಅವರಿಗೆ ರಜೆ ಹಾಕಿ ತಪ್ಪಿಸಿಕೊಳ್ಳಲು ಹೇಳಿ ಎಂದು ಅಪರಿಚಿತ ವ್ಯಕ್ತಿ ಹೇಳಿದ್ದಾನೆ.
ಈ ಬಗ್ಗೆ ಅನುಮಾನಗೊಂಡ ಜಿಪಂ ಕಾರ್ಯದರ್ಶಿ ಶಿವಕುಮಾರ್ ಅವರು ಚಿಕ್ಕಬಳ್ಳಾಪುರದ ಎಸಿಬಿ ಡಿವೈಎಸ್‌ಪಿ ಪ್ರವೀಣ್ ಕುಮಾರ್ ಅವರಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಇದಕ್ಕೆ ಅವರು, ಇಲ್ಲ ನಾನು ಯಾರಿಗೂ ಕರೆ ಮಾಡಿಲ್ಲ ಎಂದು ಹೇಳಿದ್ದಾರೆ. 10 ನಿಮಿಷ ಬಿಟ್ಟು ಶಿವಕುಮಾರ್ ಮತ್ತೆ ಆತನಿಗೆ ಕರೆ ಮಾಡಿದ್ದು, ಆಗ ಅವನು ನೀವು ರಜೆ ಹಾಕಿದ್ದೀರಾ, ಅಧಿಕಾರಿಗಳು ಮತ್ತು ಅಡ್ವೊಕೇಟ್ ಜನರಲ್ ಬಂದಿದ್ದಾರೆ. ಅವರಿಗೆಲ್ಲಾ ಮಾತನಾಡಿದ್ದೀನಿ ಎಂದು ಹೇಳಿದ್ದಾನೆ. ಜೊತೆಗೆ ಅಡ್ವೊಕೇಟ್ ಜನರಲ್ ಶ್ರೀಲಂಕಾ ಮತ್ತು ಮಾನಸ ಸರೋವರಕ್ಕೆ ಟ್ರಿಪ್ ಹೋಗುತ್ತಿದ್ದು, ಅವರಿಗೆ ಗಿಫ್ಟ್ ಕೊಡಬೇಕೆ೦ದು ತಿಳಿಸಿದ್ದಾನೆ. ಅದಕ್ಕೆ ಈ ಕೂಡಲೇ 65,000 ರೂ. ಕೊಡಬೇಕೆಂದು ಒತ್ತಾಯಿಸಿದ್ದಾನೆ.
ಅಲ್ಲದೇ ಎಸಿಬಿ ಮುಖ್ಯ ಕಚೇರಿ ಖನಿಜ ಭವನದಲ್ಲಿರುವ ಉಮೇಶ್ ಕುಮಾರ್ ಹಾಗೂ ನವೀನ್ ಕುಮಾರ್ ಅವರಿಗೆ ಫೋನ್ ಪೇ ಅಥವಾ ಗೂಗಲ್ ಪೇ ಮೂಲಕ ಹಣ ಪಾವತಿ ಮಾಡಲು ಒತ್ತಾಯಿಸಿದ್ದು, ಈ ಬಗ್ಗೆ ನಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಂತಹ ಹಲವು ಪ್ರಕರಣಗಳು ಕೋಲಾರ, ಬೆಂಗಳೂರು ಗ್ರಾಮಾಂತರ ಹಾಗೂ ಇತರ ಜಿಲ್ಲೆಯಲ್ಲೂ ವರದಿಯಾಗಿವೆ.