ಚಿಕ್ಕಬಳಾಪುರ: ಸರ್ಕಾರಿ ಜಾಗಕ್ಕೆ ತಹಶೀಲ್ದಾರ್ ಸಹಿಯನ್ನೇ ನಕಲಿ ಮಾಡಿ ಭೂಮಿಯನ್ನು ಕಬಳಿಸಿ ಸಿಕ್ಕಿಬಿದ್ದಿರುವ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಅಂಬಾಜಿ ದುರ್ಗ ಹೋಬಳಿಯ ನಾಯನಹಳ್ಳಿಯಲ್ಲಿ ನಡೆದಿದೆ.
ನಾಯನಹಳ್ಳಿ ಗ್ರಾಮದ ನಾರಾಯಣಪ್ಪ ಎಂಬಾತ ಸರ್ವೇ ನಂಬರ್ 42ರಲ್ಲಿ ಸರ್ಕಾರಿ ಖರಾಬು ಜಮೀನು 70 ಎಕರೆ ಪೈಕಿ ನಲ್ಲಿ 2004 ರಲ್ಲಿ ತನ್ನ ಹೆಸರಿಗೆ 15 ಗುಂಟೆ ಜಮೀನನ್ನ ಮಂಜೂರು ಮಾಡಿಸಿಕೊಂಡಿದ್ದಾನೆ. ಆದರೆ ನಾರಾಯಣಪ್ಪನಿಂದ ಇದೇ ನಾಯನಹಳ್ಳಿ ಗ್ರಾಮದ ಎನ್.ವಿ.ನಾರಾಯಣಸ್ವಾಮಿ ಜಮೀನಿನ ಕ್ರಯದ ಕರಾರು ಪತ್ರ ಮಾಡಿಸಿಕೊಂಡಿದ್ದಾನೆ. ಆದ್ರೆ ನಾರಾಯಣಪ್ಪನಿಂದ ಪಡೆದ ಜಮೀನಿನ ಬದಲಾಗಿ ಚಿಂತಾಮಣಿ –ಬಾಗೇಪಲ್ಲಿ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಇದೇ ಸರ್ವೇನಂಬರ್ನ ಬೇರೊಂದು ಜಾಗಕ್ಕೆ ಕನ್ನ ಹಾಕಿದ್ದಲ್ಲದೆ ತಹಶೀಲ್ದಾರ್ ಸಹಿಯನ್ನೇ ನಕಲಿ ಮಾಡಿ ಸಾಗುವಳಿ ಚೀಟಿ ಸೃಷ್ಟಿ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಓದಿ: ಬೆಂಗಳೂರು: ಅಪಾರ್ಟ್‍ಮೆಂಟ್‍ನ ಐದನೇ ಮಹಡಿಯಿಂದ ಆಯತಪ್ಪಿ ಬಿದ್ದು ಬಾಲಕ ಸ್ಥಳದಲ್ಲೇ ಸಾವು
ಇಷ್ಟೇ ಅಲ್ಲದೆ ಸರ್ಕಾರಿ ಜಾಗದಲ್ಲಿ ಹತ್ತಾರು ವರ್ಷಗಳಿಂದ ವಾಸಿಸುತ್ತಿರುವವರನ್ನ ಒಕ್ಕಲೆಬ್ಬಿಸಲು ದುರುಳರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಚಿಂತಾಮಣಿ ತಹಶೀಲ್ದಾರ್ ಸಹಿ ನಕಲಿ ಮಾಡಿ ಸಾಗುವಳಿ ಸೃಷ್ಟಿ ಮಾಡಿರೋದು ಗೊತ್ತಾಗುತ್ತಿದ್ದಂತೆ ಅಂಬಾಜಿದುರ್ಗ ಹೋಬಳಿಯ ಕಂದಾಯ ಇಲಾಖೆಯ ರೆವೆನ್ಯೂ ಇನ್ಸ್ಪೆಕ್ಟರ್ ಗುರುಪ್ರಕಾಶ್ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇತ್ತ ದೂರು ಪಡೆದ ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರು ಇದೇ ಡಿಸೆಂಬರ್ 1 ರಂದು ಆರೋಪಿಗಳಾದ ನಾರಾಯಣಪ್ಪ, ಎನ್.ವಿ.ನಾರಾಯಣಸ್ವಾಮಿ, ಸಿ.ವಿ.ಕೃಷ್ಣಾರೆಡ್ಡಿ, ಹಾಗೂ ಸುಬ್ಬರೆಡ್ಡಿ ವಿರುದ್ಧ ಐಪಿಸಿ ಸೆಕ್ಷನ್ 420, 468, 471 ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ಪ್ರಕರಣ ದಾಖಲಾಗಿ 17 ದಿಗಳು ಕಳೆದ್ರೂ ಆರೋಪಿಗಳನ್ನ ಬಂಧಿಸುವುದಾಗಲಿ, ಆರೋಪಿಗಳನ್ನ ವಿಚಾರಣೆ ನಡೆಸುವುದಾಗಲಿ ಮಾಡಿಲ್ಲವಂತೆ. ಆರೋಪಿಗಳು ಚಿಂತಾಮಣಿ ಶಾಸಕರಾದ ಜೆ.ಕೆ.ಕೃಷ್ಣಾರೆಡ್ಡಿ ಆಪ್ತರಾದ ಕಾರಣಕ್ಕೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಅಂತ ಸ್ಥಳೀಯರು ದೂರಿದ್ದಾರೆ.
ಒಟ್ಟಿನಲ್ಲಿ ತಹಶೀಲ್ದಾರ್ ಸಹಿಯನ್ನೇ ನಕಲಿ ಮಾಡಿದ್ದಲ್ಲದೆ, ನಕಲಿ ಸಾಗುವಳಿ ಸೃಷ್ಟಿಸಿ ಸರ್ಕಾರಕ್ಕೆ ಪಂಗನಾಪ ಹಾಕಲು ಹೊರಟಿದ್ದ ದುರುಳರು ಸಿಕ್ಕಿಬಿದ್ದಿದ್ದರು ಆರೋಪಿಗಳ ವಿರುದ್ಧ ಕ್ರಮ ಯಾಕೆ ಕೈಗೊಂಡಿಲ್ಲ ಅಂತ ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಇನ್ನಾದ್ರೂ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಇತ್ತ ಗಮನಹರಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತಾರಾ ? ಇಲ್ಲವೇ ಪ್ರಭಾವಿಗಳ ಒತ್ತಡಕ್ಕೆ ಮಣಿದು ಪ್ರಕರಣ ಮುಚ್ಚಿಹಾಕುತ್ತಾರಾ..? ಎಂಬುದನ್ನು ಕಾದು ನೋಡಬೇಕಿದೆ.