ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಹೆಣ್ಣೂರು ಗ್ರಾಮದಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿ ಮೂವರು ಸಾವನ್ನಪ್ಪಿದ ದುರಂತ ಘಟನೆ ಬೆಳಕಿಗೆ ಬಂದಿದೆ. ಆತ್ಮಹತ್ಯೆ ವೇಳೆ ಇಬ್ಬರು ಮಕ್ಕಳು, ಪತ್ನಿ ಸಾವನ್ನಪ್ಪಿದ್ದು ಪತಿಯ ಸ್ಥಿತಿ ಗಂಭೀರವಾಗಿದೆ.
ಪತ್ನಿ ನೇತ್ರಾವತಿ ಮಕ್ಕಳಾದ ಹರ್ಷಿತ ಮತ್ತು ಸ್ನೇಹ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಪತಿ ಸೊನ್ನೆಗೌಡನ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಅಂತ ಮಾಹಿತಿ ತಿಳಿದು ಬಂದಿದೆ. ಘಟನೆಗೆ ಕಾರಣ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ. ಘಟನೆಗೆ ಸಂಬಂಧಿಸಿದಂತೆ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಎಸ್ಪಿ ಪ್ರತಿಕ್ರಿಯೆ : ಘಟನೆ ಬಗ್ಗೆ ಮಾತನಾಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್. ನಾಗೇಶ್ ''ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಲಾಗಿದೆ. ಮೃತ ಮಹಿಳೆಯ ಪತಿಯೂ ಕೂಡ ಬೆಂಕಿ ಹಚ್ಚಿಕೊಂಡಿದ್ದಲ್ಲದೆ, ವಿಷವನ್ನೂ ಸೇವಿಸಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ವ್ಯಕ್ತಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳು ಬೆಂಕಿಯಿಂದ ಮೃತಪಟ್ಟಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಮೃತದೇಹದ ಮೇಲೆ ಬೇರೆ ಗಾಯಗಳೇದಾದರೂ ಆಗಿದೆಯಾ ಎಂಬ ಬಗ್ಗೆ ತನಿಖೆ ನಡೆಸಲಾಗುವುದು. ಪತ್ನಿಯನ್ನು ಕೊಲೆಗೈದು, ಬಳಿಕ ಆತ್ಮಹತ್ಯೆಗೆ ಯತ್ನಿಸಿರುವ ಸಾಧ್ಯತೆಯೂ ಇದೆ. ಮೃತದೇಹಗಳ ಮರಣೋತ್ತರ ಪರೀಕ್ಷೆ ಬಳಿಕ ಸಾವಿಗೆ ಕಾರಣ ಏನೆಂಬುದು ತಿಳಿದುಬರಲಿದೆ. ಈ ಹಿಂದೆ ಕೂಡ ಮೃತ ಮಹಿಳೆಯು ಕೌಟುಂಬಿಕ ಕಲಹ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರು, ಈ ಬಗ್ಗೆಯೂ ತನಿಖೆ ಮುಂದುವರೆದಿದೆ'' ಎಂದು ಮಾಹಿತಿ ನೀಡಿದ್ದಾರೆ.
ಓದಿ: ಓದುವುದು ಬೇಡ ಮದುವೆಯಾಗು ಎಂದು ಪೀಡಿಸಿದ ಯುವಕ: ಮನನೊಂದು ಯುವತಿ ಆತ್ಮಹತ್ಯೆ
ಆಟೋ ಡ್ರೈವರ್ ಆತ್ಮಹತ್ಯೆ: ಪ್ರತ್ಯೇಕ ಘಟನೆಯಲ್ಲಿ ಸೈಟ್ ವಿಚಾರಕ್ಕೆ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಕೆಂಚಾರ್ಲಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಚಿಕ್ಕಕರಕಮಾಕಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಸೈಟ್ ಖರೀದಿ ಮಾಡಿದ ಬಳಿಕ ಸಂಬಂಧಪಟ್ಟ ಅಧಿಕಾರಿಗಳು ನೋಂದಣಿ ಮಾಡಿಕೊಡದೆ ಕಿರುಕುಳ ನೀಡುತ್ತಿರುವ ಕಾರಣಕ್ಕೆ ಬೇಸತ್ತು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಆರೋಪ ಕೇಳಿಬಂದಿದೆ. ಆಟೋ ಡ್ರೈವರ್ ಆಗಿದ್ದ ಕೊತ್ತಪಲ್ಲಿ ಗ್ರಾಮದ ಕೆ ವಿ ಮಂಜುನಾಥ್ ರೆಡ್ಡಿ (44) ಎಂಬುವರು ಆತ್ಮಹತ್ಯೆ ಮಾಡಿಕೊಂಡವರು.
2016ರಲ್ಲಿ ಸಾಲ ಮಾಡಿ ಬೆಂಗಳೂರಿನ ಜಾಲ ಹೋಬಳಿ ಮರಳುಕುಂಟೆ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿದ ಮಾರೇನಹಳ್ಳಿ ಬಳಿ ಸೈಟ್ ಖರೀದಿಸಿ ತನ್ನ ಪತ್ನಿ ಆರ್ ಮಂಜುಳಾ ಹೆಸರಿಗೆ ನೋಂದಣಿ ಮಾಡಿಕೊಂಡಿದ್ದರಂತೆ. ಆದರೆ ಸೈಟ್ ಸೀಲ್ ಮಾಡುವ ವಿಚಾರದಲ್ಲಿ ಕೆಲ ವ್ಯಕ್ತಿಗಳು ಕಿರುಕುಳ ನೀಡಿದ್ದಾರೆ. ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪತ್ನಿ ದೂರಿನಲ್ಲಿ ಹೇಳಿದ್ದಾರೆ. ಘಟನೆ ಸಂಬಂಧ ಕೆಂಚಾರ್ಲಳ್ಳಿ ಪೊಲೀಸ್ ಠಾಣೆಗೆ ಪತ್ನಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.