ಚಿಕ್ಕಬಳ್ಳಾಪುರ: ಕೊರೊನಾ ಹಿನ್ನೆಲೆ ಸ್ಥಗಿತಗೊಳಿಸಿದ್ದ ಸರ್ಕಾರಿ ಬಸ್‌ಗಳ ಸೇವೆಯನ್ನು ಪುನಾರಂಭಿಸುವಂತೆ ಒತ್ತಾಯಿಸಿ ಶಿಡ್ಲಘಟ್ಟದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಸದ್ಯ ಶಾಲಾ-ಕಾಲೇಜುಗಳು ಪುನಾರಂಭವಾಗಿದ್ದು, ಗ್ರಾಮೀಣ ವಿದ್ಯಾರ್ಥಿಗಳು ಸರ್ಕಾರಿ ಬಸ್ಗಳನ್ನು ಅವಲಂಬಿಸಿದ್ದಾರೆ. ಆದರೆ ಸೂಕ್ತ ಸಮಯಕ್ಕೆ ಬಸ್ ಸೌಕರ್ಯವಿಲ್ಲದೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪರದಾಡುವಂತಾಗಿದೆ.
ಗ್ರಾಮೀಣ ಭಾಗಗಳಿಂದ ನಗರ ಪ್ರದೇಶಗಳಿಗೆ ಬರುವ ವಿದ್ಯಾರ್ಥಿಗಳು ಪ್ರತಿನಿತ್ಯ ನೂಕು ನೂಗ್ಗಲಿನಲ್ಲಿಯೇ ಬಸ್ ಬಾಗಿಲಲ್ಲಿ ನಿಂತು ಪ್ರಾಣ ಭಯದಿಂದ ಶಾಲಾ-ಕಾಲೇಜುಗಳಿಗೆ ಬರುತ್ತಿದ್ದಾರೆ. ಶಿಡ್ಲಘಟ್ಟ ತಾಲೂಕು, ಚಿಂತಾಮಣಿ, ಬಾಗೇಪಲ್ಲಿ, ಗುಡಿಬಂಡೆ ಸೇರಿದಂತೆ ಜಿಲ್ಲೆಯ ಹಲವೆಡೆಯ ವಿದ್ಯಾರ್ಥಿಗಳಿಗೆ ಸೂಕ್ತ ಸಮಯಕ್ಕೆ ಬಸ್ ವ್ಯವಸ್ಥೆಯಿಲ್ಲ.
ಬರುವ ಒಂದೇ ಬಸ್ಸಿನಲ್ಲಿ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ನಿಂತು ಪ್ರಯಾಣ ಮಾಡುತ್ತಿದ್ದು, ಬಿದ್ದು ಅನಾಹುತವಾದರೆ ಯಾರು ಜವಾಬ್ದಾರರು ಎಂದು ಬಸ್ ಚಾಲಕ, ನಿರ್ವಾಹಕನನ್ನು ವಿದ್ಯಾರ್ಥಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.
ಪ್ರತಿ ನಿತ್ಯ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜುಗಳಿಗೆ ಹೋಗಲು ನರಕಯಾತನೆ ಅನುಭವಿಸುತ್ತಿದ್ದು, ಕೂಡಲೇ ಸಂಬಂಧಪಟ್ಟವರು ನಿಲ್ಲಿಸಲಾಗಿರುವ ಬಸ್ ಸೇವೆಯನ್ನು ಪುನಾರಂಭಿಸುವಂತೆ ವಿದ್ಯಾರ್ಥಿಗಳು ಆಗ್ರಹಿಸಿದರು.