ಚಿಕ್ಕಬಳ್ಳಾಪುರ: ತಾಯಿಯನ್ನು ಕೊಂದು ಮಗ ನೇಣಿಗೆ ಶರಣಾದ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮಾಡಿಕೇರಿ ಗ್ರಾಮದಲ್ಲಿ ನಡೆದಿದೆ.
ವೆಂಕಟಮ್ಮ (85) ಮೃತ ತಾಯಿ. ಜಯರಾಮಪ್ಪ (46) ತಾಯಿಯನ್ನು ಕೊಂದ ಮಗ.
ಜಯರಾಮಪ್ಪ ಗ್ರಾಮದಲ್ಲಿ ಟೈಲರ್ ವೃತ್ತಿಯ ಜೊತೆಗೆ ಕ್ಷೌರ ಕೆಲಸವನ್ನು ನಿರ್ವಹಿಸುತ್ತಿದ್ದನು. 85 ವರ್ಷದ ತಾಯಿಯನ್ನು ಆರೈಕೆ ಮಾಡಲಾಗದೇ ಕುಡಿದ ಅಮಲಿನಲ್ಲಿ ಮನೆಯಲ್ಲಿಯೇ ತಾಯಿಗೆ ಪೆಟ್ರೋಲ್ ಸುರಿದು ಸುಟ್ಟು ಹಾಕಿ, ನಂತರ ಭಯಭೀತನಾಗಿ ತಾನೂ ಮನೆಯಲ್ಲಿಯೇ ನೇಣಿಗೆ ಶರಣಾನಾಗಿರುವುದಾಗಿ ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಡಿವೈಎಸ್ಪಿ ಶ್ರೀನಿವಾಸ್, ಗ್ರಾಮಾಂತರ ಠಾಣೆ ಸಬ್ ಇನ್ಸ್ಪೆಕ್ಟರ್ ಜಗದೀಶ್ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.