ಬಾಗೇಪಲ್ಲಿ (ಚಿಕ್ಕಬಳ್ಳಾಪುರ): ವಿದ್ಯಾರ್ಥಿಗಳ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಎಸ್ಎಫ್ಐ ಸಂಘಟನೆ ಕಾರ್ಯಕರ್ತರು ನಗರದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ.
ಈ ವೇಳೆ ಮಾತನಾಡಿದ ಎಸ್ಎಫ್ಐ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ್, ಕೊರೊನಾ ಕಾಲದಲ್ಲಿ ಆನ್ಲೈನ್ ತರಗತಿ ಆರಂಭಿಸುತ್ತಿರುವುದರಿಂದ ಬಡ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಲಿದೆ. ತರಗತಿ ಆರಂಭಿಸುವ ಮೊದಲು ಅದಕ್ಕೆ ಪೂರ್ವ ಸಿದ್ಧತೆ ಮಾಡಬೇಕಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ ಅದೆಷ್ಟೋ ಬಡವರ ಮಕ್ಕಳ ಬಳಿ ಮೊಬೈಲ್ ಫೋನ್ಗಳಿಲ್ಲ. ಅದರ ಜೊತೆಗೆ ನೂರಾರು ರೂಪಾಯಿ ವ್ಯಯಿಸಿ ಇಂಟರ್ನೆಟ್ ಪ್ಯಾಕ್ ಹಾಕಿಸಲಾಗುತ್ತದೆಯೆ? ಹಾಗಾಗಿ ವಿದ್ಯಾರ್ಥಿಗಳ ಎಲ್ಲಾ ಶೈಕ್ಷಣಿಕ ಶುಲ್ಕಗಳನ್ನು 6 ತಿಂಗಳ ಕಾಲ ಮನ್ನಾ ಮಾಡಬೇಕು. ಆನ್ಲೈನ್ ಶಿಕ್ಷಣ ಕಡ್ಡಾಯ ಬೇಡ ಎಂದರು.
ಆನ್ಲೈನ್ ಶಿಕ್ಷಣ ಕೊಡುತ್ತೇವೆ ಎಂದು ಪೋಷಕರಿಂದ ಹಣ ವಸೂಲಿ ಮಾಡುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. 12ನೇ ತರಗತಿವರೆಗೆ ಎಲ್ಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಕೊಡಬೇಕು. ಪ್ರತಿ ತಿಂಗಳು 10 ಕೆಜಿ ಅಕ್ಕಿ ಹಾಗೂ ಅಗತ್ಯ ಆಹಾರ ಪದಾರ್ಥಗಳನ್ನು 6 ತಿಂಗಳು ಕಾಲ ವಿದ್ಯಾರ್ಥಿಗಳ ಮನೆಗೆ ತಲುಪಿಸಬೇಕು. ಲಾಕ್ಡೌನ್ ಸಮಯದಲ್ಲಿ ಪ್ರತಿ ವಿದ್ಯಾರ್ಥಿ ಕುಟುಂಬ ನಿರ್ವಹಣೆಗಾಗಿ ಪ್ರತಿ ತಿಂಗಳು 7,500 ರೂಪಾಯಿಗಳನ್ನು 6 ತಿಂಗಳ ಕಾಲ ನೀಡಬೇಕು ಎಂದು ಸೋಮಶೇಖರ್ ಒತ್ತಾಯಿಸಿದರು.
ಸರ್ಕಾರಿ, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುವ ಅತಿಥಿ ಶಿಕ್ಷಕರು, ಉಪನ್ಯಾಸಕರು ಹಾಗೂ ಕಾರ್ಮಿಕರಿಗೆ ಬಾಕಿ ಸಂಬಳ ಬಿಡುಗಡೆ ಮಾಡಬೇಕು ಎಂದರು.