ಬಾಗೇಪಲ್ಲಿ : ಅಕ್ರಮವಾಗಿ ಪಡತರ ಪದಾರ್ಥಗಳನ್ನ ಸಂಗ್ರಹಿಸಿಟ್ಟಿದ್ದ ನ್ಯಾಯ ಬೆಲೆ ಅಂಗಡಿ ಮೇಲೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ನಿರ್ದೇಶಕರು ದಾಳಿ ನಡೆಸಿರುವ ಘಟನೆ ತಾಲೂಕಿನ ಪಾತಬಾಗೇಪಲ್ಲಿ ಗ್ರಾಮದಲ್ಲಿ ನಡೆದಿದೆ.
ಅಕ್ರಮ ದಾಸ್ತಾನು ಮಾಡಿದ್ದ 1.50 ಲಕ್ಷ ರೂ. ಮೌಲ್ಯದ ಪಡಿತರ ಪದಾರ್ಥಗಳನ್ನು ಇಲಾಖೆ ಉಪ ನಿರ್ದೇಶಕಿ ಸವಿತಾ ಜಪ್ತಿ ಮಾಡಿದರು. ಅಷ್ಟೇ ಅಲ್ಲ, ನ್ಯಾಯಬೆಲೆ ಅಂಗಡಿ ಮಾಲೀಕ ರಾಜಗೋಪಾಲರೆಡ್ಡಿ ವಿರುದ್ಧ ಪ್ರಕರಣ ದಾಖಲಿಸಿ ಆತನ ಪರವಾನಿಗೆ ಅಮಾನತುಗೊಳಿಸಲು ಶಿಫಾರಸು ಮಾಡಿದ್ದಾರೆ.
ಪಾತಬಾಗೇಪಲ್ಲಿ ನ್ಯಾಯಬೆಲೆ ಅಂಗಡಿ ವ್ಯಾಪ್ತಿಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ನೂರಾರು ಬಡಕುಟುಂಬಗಳಿಗೆ ಹಂಚಿಕೆ ಮಾಡುವ ಉದ್ದೇಶಕ್ಕಾಗಿ ಪಡಿತರ ಪದಾರ್ಥಗಳನ್ನು ಸರಬರಾಜು ಮಾಡಲಾಗಿದೆ. ಆದರೆ, ನ್ಯಾಯಬೆಲೆ ಅಂಗಡಿ ಮಾಲೀಕ ರಾಜಗೋಪಾಲರೆಡ್ಡಿ ಪ್ರತಿ ತಿಂಗಳು ಪಡಿತರ ವಿತರಿಸಲಾಗಿದೆ ಎಂದು ಆಹಾರ ಇಲಾಖೆಗೆ ಲೆಕ್ಕ ಕೊಟ್ಟು ಅಕ್ರಮವಾಗಿ ಪಡಿತರ ಪದಾರ್ಥಗಳನ್ನು ಸಂಗ್ರಹಿಸಿದ್ದ.
ಅನಧಿಕೃತವಾಗಿ ದಾಸ್ತಾನು ಮಾಡಿರುವ ಪಡಿತರದ ಬಗ್ಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡದೆ ತಪ್ಪು ಲೆಕ್ಕಗಳನ್ನು ತೋರಿಸಿ ಕಾಳ ಸಂತೆಯಲ್ಲಿ ಮಾರಾಟ ಮಾಡಲು ಮುಂದಾಗಿದ್ದ ಎನ್ನಲಾಗಿದೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳ ತಂಡ ನ್ಯಾಯಬೆಲೆ ಅಂಗಡಿ ಮೇಲೆ ಹಠಾತ್ ದಾಳಿ ನಡೆಸಿ ದಾಸ್ತಾನು ಬಗ್ಗೆ ಪರಿಶೀಲಿಸಿದಾಗ 1.50 ಲಕ್ಷ ರೂ. ಮೌಲ್ಯದ 50 ಕ್ವಿಂಟಾಲ್ ಪಡಿತರವನ್ನು ಅಕ್ರಮವಾಗಿ ದಾಸ್ತಾನು ಮಾಡಿರುವುದು ಬೆಳಕಿಗೆ ಬಂದಿದೆ.
ಅಕ್ರಮ ದಾಸ್ತಾನು ಮಾಡಿರುವ 1.50 ಲಕ್ಷ ರೂ. ಮೌಲ್ಯದ ಪಡಿತರವನ್ನು ಅಧಿಕಾರಿಗಳ ತಂಡ ವಶಕ್ಕೆ ಪಡೆದುಕೊಂಡು ಸರ್ಕಾರಕ್ಕೆ ಒಪ್ಪಿಸಿದ್ದಾರೆ. ಅಕ್ರಮದಲ್ಲಿ ಬಾಗಿಯಾಗಿರುವ ನ್ಯಾಯಬೆಲೆ ಅಂಗಡಿ ಮಾಲೀಕ ರಾಜಗೋಪಾಲರೆಡ್ಡಿ ವಿರುದ್ಧ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ, ನ್ಯಾಯಬೆಲೆ ಅಂಗಡಿ ಪರವಾನಿಗೆ ಅಮಾನತಿಗೆ ಶಿಫಾರಸು ಮಾಡಲಾಗಿದೆ.