ಚಿಕ್ಕಬಳ್ಳಾಪುರ : ಮದುವೆ ಲಗ್ನಪತ್ರಿಕೆ ಕೊಡುವ ನೆಪದಲ್ಲಿ ದರೋಡೆಕೋರರು ಮನೆಗೆ ನುಗ್ಗಿ, ಮನೆಯಲ್ಲಿದ್ದ ಚಿನ್ನಾಭರಣ ಮತ್ತು ನಗದು ದೋಚಿ ಪರಾರಿಯಾಗಿರುವ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಚಂಡ್ರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಘಟನೆ ವಿವರ: ಚಿಂತಾಮಣಿ ತಾಲೂಕಿನ ಚಂಡ್ರಹಳ್ಳಿ ಗ್ರಾಮದ ನಾರಾಯಣಸ್ವಾಮಿ ದಂಪತಿ ಊರಿನ ಹೊರಭಾಗದ ತೋಟದಲ್ಲಿ ಮನೆ ಕಟ್ಟಿಕೊಂಡು ಇಳಿ ವಯಸ್ಸಿನಲ್ಲಿ ಜೀವನ ಸಾಗಿಸುತ್ತಿದ್ದಾರೆ. ನಾರಾಯಣಸ್ವಾಮಿಯವರು ಕಂದಾಯ ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತರಾಗಿದ್ದಾರೆ. ಆದರೆ ಮೊನ್ನೆ ರಾತ್ರಿ 10 ಗಂಟೆ ಸುಮಾರಿಗೆ ಮದುವೆಯ ಆಮಂತ್ರಣ ಕೊಡುವ ನೆಪದಲ್ಲಿ ದರೋಡೆಕೋರರು ಮನೆಯ ಬಳಿ ಬಂದಿದ್ದಾರೆ.
ಶ್ರೀನಿವಾಸಪುರದಿಂದ ನಿಮಗೆ ಲಗ್ನಪತ್ರಿಕೆ ಕೊಡಲು ಬಂದಿದ್ದೇವೆ ಎಂದು ಹೇಳಿ ಮನೆಯೊಳಗೆ ಪ್ರವೇಶಿಸಿದ್ದಾರೆ. ಕುಡಿಯಲು ನೀರು ಕೊಡಿ ಎಂದು ವೃದ್ಧೆಗೆ ಕೇಳಿದ್ದಾರೆ. ವೃದ್ಧೆ ನೀರು ತರಲು ಹೋದ ತಕ್ಷಣ ಹಿಂಬದಿಯಿಂದ ವೃದ್ಧೆಯ ಮೇಲೆ ಮುಗಿಬಿದ್ದು ದಂಪತಿಯನ್ನು ಸೋಫಾಗೆ ಕಟ್ಟಿ ಹಾಕಿ ದೋಚಲು ಪ್ರಾರಂಭಿಸಿದ್ದಾರೆ.
ದಂಪತಿ ಎಷ್ಟೇ ಕಿರುಚಾಡಿದರೂ ಊರಿನವರಿಗೆ ಕೇಳಿಸಿಲ್ಲ. ದರೋಡೆಕೋರರು ಮನೆಯ ಕೊನೆಯ ಲಾಕರ್ನಲ್ಲಿ ಇದ್ದ 150 ಗ್ರಾಂ ಚಿನ್ನ, 250 ಗ್ರಾಂ ಬೆಳ್ಳಿ ಹಾಗೂ ಹನ್ನೊಂದು ಸಾವಿರ ನಗದನ್ನು ದೋಚಿ ಪರಾರಿಯಾಗಿದ್ದಾರೆ. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.