ಚಿಕ್ಕಬಳ್ಳಾಪುರ: ಸರ್ಕಾರ ರೀಲರ್ಗಳಿಂದ ಕಚ್ಚಾ ರೇಷ್ಮೆ ನೂಲನ್ನು ಖರೀದಿಸುವಂತೆ ಆಗ್ರಹಿಸಿ ರೀಲರ್ಸ್ ಅಸೋಸಿಯೇಷನ್ ಪದಾಧಿಕಾರಿಗಳು ಚಿಂತಾಮಣಿ ನಗರದ ರೇಷ್ಮೆ ಗೂಡಿನ ಮಾರುಕಟ್ಟೆ ಮುಂಭಾಗ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಲಾಕ್ಡೌನ್ ಹಿನ್ನೆಲೆಯಲ್ಲಿ ರೇಷ್ಮೆ ನೂಲು ಬಿಚ್ಚಾಣಿಕೆದಾರರಿಂದ ಕಚ್ಚಾ ರೇಷ್ಮೆ ಖರೀದಿಸಲು ಸರ್ಕಾರ ಮುಂದೆ ಬರುತ್ತಿಲ್ಲ. ಹಾಗಾಗಿ ಹಲವು ರೈತರು ಮತ್ತು ಸಿಲ್ಕ್ ರೀಲರ್ ಗಳು ಬೀದಿ ಪಾಲಾಗುತ್ತಿದ್ದಾರೆ ಎಂದು ರೀಲರ್ಸ್ ಅಸೋಸಿಯೇಷನ್ ಪದಾಧಿಕಾರಿಗಳು ಅಳಲು ತೋಡಿಕೊಂಡರು. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ರೈತರು ತುಂಬಾ ಕಷ್ಟಪಟ್ಟು ರೇಷ್ಮೆ ಗೂಡನ್ನು ಇಲ್ಲಿನ ಮಾರುಕಟ್ಟೆಗೆ ತರುತ್ತಿದ್ದಾರೆ. ಸರ್ಕಾರ ರೀಲರ್ಗಳಿಂದ ರೇಷ್ಮೆ ನೂಲು ಖರೀದಿಸುತ್ತಿಲ್ಲ. ಆದ್ದರಿಂದ ನಾವು ಕೂಡ ರೈತರಿಂದ ರೇಷ್ಮೆ ಗೂಡು ಖರೀದಿ ಮಾಡುತ್ತಿಲ್ಲ. ಈ ಕಾರಣಕ್ಕೆ ಹಲವು ರೈತರು ಬೀದಿ ಪಾಲು ಆಗುತ್ತಿದ್ದಾರೆ. ಕೂಡಲೇ ಸರ್ಕಾರ ರೀಲರ್ಗಳಿಂದ ಕಚ್ಚಾ ರೇಷ್ಮೆ ನೂಲು ಖರೀದಿಸದಿದ್ದರೆ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ರೀಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಸಿ ಕೆ ಶಬ್ಬೀರ್, ಕಿಜರ್ ಪಾಷಾ, ಇನಾಯತ್, ಬಾಬು ಸೇರಿದಂತೆ ಹಲವಾರು ರೀಲರ್ ಗಳು ಭಾಗವಹಿಸಿದ್ದರು.