ಚಿಕ್ಕಬಳ್ಳಾಪುರ: ಕಳೆದ ಮೂರು ದಿನಗಳಿಂದ ಸುರಿದ ಮಳೆಗೆ ಜಿಲ್ಲೆಯ ಜನರು ಸಂಕಷ್ಟಕ್ಕೀಡಾಗಿದ್ದಾರೆ. ರಾತ್ರಿ ಅಪಾರ ಪ್ರಮಾಣದಲ್ಲಿ ಮಳೆಯಾಗಿದ್ದು, ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕೆಂಕೆರೆ ಗ್ರಾಮದ ಕೆರೆಕಟ್ಟೆ ಒಡೆದಿದೆ. ಪರಿಣಾಮ ಕೃಷಿ ಭೂಮಿಗೆ ನೀರು ನುಗ್ಗಿ, ಅಪಾರ ಪ್ರಮಾಣದ ಬೆಳೆ ನಷ್ಟ ಸಂಭವಿಸಿದೆ.
ಕಳೆದ 22 ವರ್ಷಗಳ ನಂತರ ಇದೇ ಮೊದಲ ಬಾರಿಗೆ 15 ದಿನಗಳಿಂದ ಕೆರೆ ಮೈದುಂಬಿ ಕೋಡಿ ಹರಿದಿದೆ. ಆದರೆ ತಡರಾತ್ರಿ ಕೆರೆ ಕಟ್ಟೆಯ ಮಧ್ಯಭಾಗದಲ್ಲಿ ಸಲ್ಪ ಬಿರುಕು ಕಾಣಿಸಿಕೊಂಡಿದ್ದು, ಬೆಳಗ್ಗೆ ಅಷ್ಟೊತ್ತಿಗೆ ಕೆರೆ ಏರಿ ಕಟ್ಟೆ ಸಂಪೂರ್ಣವಾಗಿ ಒಡೆದು ಹೋಗಿದೆ. ಇನ್ನು, ಮೆಕ್ಕೆಜೋಳ, ಟೊಮೆಟೊ, ಕನಕಾಂಬರಿ, ರೋಜಾ, ಸುಗಂಧ ಹೂವಿನ ತೋಟಗಳಿಗೆ ಏಕಾಏಕಿ ನೀರು ನುಗ್ಗಿದ್ದು, ನೂರಾರು ಎಕರೆಯಲ್ಲಿದ್ದ ಬೆಳೆಗಳು ನಾಶವಾಗಿವೆ.
ರಭಸವಾಗಿ ನೀರು ಹರಿಯುತ್ತಿರುವ ಕಾರಣ ಕೆಂಕೆರೆ ಗ್ರಾಮದ 13 ಮನೆಗಳಿಗೆ ನೀರು ನುಗ್ಗಿದೆ. ಕೆಟಿ ಹಳ್ಳಿ ಗ್ರಾಮಸ್ಥರಿಗೆ ಎತ್ತರದ ಪ್ರದೇಶಕ್ಕೆ ಹೋಗುವಂತೆ ಸೂಚಿಸಲಾಗಿದೆ. ಗೌರಿಬಿದನೂರು ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಕೆರೆ ಏರಿಯತ್ತ ಯಾರು ಹೋಗದಂತೆ ಎಚ್ಚರಿಕೆಯನ್ನು ನೀಡಿದ್ದಾರೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಭಾರಿ ಮಳೆ: ಹಲವೆಡೆ ರಸ್ತೆ ಸಂಚಾರ ಸಂಪೂರ್ಣ ಬಂದ್