ಗುಡಿಬಂಡೆ: ಪ.ಜಾತಿ ಹಾಗೂ ಪಂಗಡ ಸಮುದಾಯಗಳ ಅಭಿವೃದ್ಧಿಗಾಗಿ ಸರ್ಕಾರದಿಂದ ವಿವಿಧ ಯೋಜನೆಗಳಡಿ ಬಿಡುಗಡೆಯಾಗುವ ಅನುದಾನ ದುರುಪಯೋಗವಾಗುತ್ತಿರುವುದನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ ತಾಲೂಕು ಪಂಚಾಯಿತಿ ಮುಂಭಾಗ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಂಡಿದೆ.
ಈ ವೇಳೆ ಮಾತನಾಡಿದ ದ.ಸಂ.ಸ ಜಿಲ್ಲಾ ಸಂಚಾಲಕ ಜಿ.ವಿ.ಗಂಗಪ್ಪ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಂದ ಇಂದು ಎಸ್ಸಿ ಹಾಗೂ ಎಸ್ಟಿ ಹಾಗೂ ಹಿಂದುಳಿದ ವರ್ಗಗಳಿಗೆ ಸರ್ಕಾರದಿಂದ ಅನೇಕ ಯೋಜನೆಗಳಿಗಾಗಿ ಅನುದಾನ ಬಿಡುಗಡೆಯಾಗುತ್ತಿದೆ. ಎಸ್ಸಿಪಿ ಮತ್ತು ಟಿ.ಎಸ್.ಪಿ ಯೋಜನೆಯಡಿ ಕೃಷಿ, ತೋಟಗಾರಿಕೆ, ಅರಣ್ಯ, ರೇಷ್ಮೆ, ಪಿ.ಆರ್.ಇ.ಡಿ, ಕೆ.ಆರ್.ಐ.ಡಿ.ಎಲ್ ಮೊದಲಾದ ಇಲಾಖೆಗಳ ಮೂಲಕ ದಲಿತ ವರ್ಗದ ಆರ್ಥಿಕ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆಯಾಗುತ್ತದೆ. ಆದರೆ, ಆ ಅನುದಾನ ಮಾತ್ರ ದಲಿತರ ಅಭಿವೃದ್ಧಿಗಾಗಿ ಬಳಕೆಯಾಗುತ್ತಿಲ್ಲ ಎಂದು ಆರೋಪಿಸಿದರು.
ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಯೋಜನೆಯಡಿ ನಡೆದಿರುವ ಅನುದಾನ ದುರುಪಯೋಗದ ಬಗ್ಗೆ ರಾಜ್ಯ ಮಟ್ಟದ ತನಿಖೆಯಾಗುವುದು, ಸದರಿ ಯೋಜನೆಗಳಲ್ಲಿ ಅನುದಾನ ದುರ್ಬಳಕೆ ಮಾಡಿರುವ ಅಧಿಕಾರಿ ಹಾಗೂ ಗುತ್ತಿಗೆದಾರರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.