ಚಿಕ್ಕಬಳ್ಳಾಪುರ : ಕಳೆದ 19 ವರ್ಷಗಳಿಂದ ಗೌರಿಬಿದನೂರು ತಾಲೂಕಿನಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬೈಪಾಸ್ ಗಣೇಶೋತ್ಸವ ಸಮಿತಿಯ ವತಿಯಿಂದ ಅದ್ಧೂರಿ ಗಣೇಶೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ಕೊರೊನಾದಿಂದ ಮಂಕಾಗಿದ್ದ ಚತುರ್ಥಿ ಈ ವರ್ಷ ಅದ್ಧೂರಿಯಾಗಿ ನಡೆಸಲು ಸಾಕಷ್ಟು ತಯಾರಿ ನಡೆಸಲಾಗುತ್ತಿದೆ.
ಬೈಪಾಸ್ ಗಣೇಶೋತ್ಸವ ಜಿಲ್ಲೆಯಲ್ಲಿಯೇ ಸಾಕಷ್ಟು ಪ್ರಸಿದ್ಧಿ ಪಡೆದಿದ್ದು, 20 ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈಗಾಗಲೇ ಕೋಲ್ಕತ್ತಾ ಮೂಲದ ಕಲಾವಿದರು ಕಳೆದ 1 ತಿಂಗಳಿನಿಂದ ಗಣೇಶ ಮೂರ್ತಿಯನ್ನು ಸಿದ್ಧಪಡಿಸುವಲ್ಲಿ ಸಾಕಷ್ಟು ಶ್ರಮಿಸುತ್ತಿದ್ದಾರೆ. ಇವರ ಪರಿಶ್ರಮದ ಫಲವಾಗಿ ಶೀಘ್ರದಲ್ಲೇ ಗಣೇಶ ಮೂರ್ತಿ ಪ್ರತಿಷ್ಠಾಪನೆಯಾಗಲಿದೆ.
ಸುಮಾರು 19 ಅಡಿ ಎತ್ತರದ ಸಿಂಹ ಶಿಬಿರ ಗಣಪತಿ ಮೂರ್ತಿ ಸಿದ್ಧಗೊಂಡಿದ್ದು, ಅದನ್ನು 19 ದಿನಗಳ ಕಾಲ ಪ್ರತಿಷ್ಠಾಪಿಸಲು ಈಗಾಗಲೇ ಪೂರ್ವ ಸಿದ್ಧತೆ ಮಾಡಿಕೊಂಡಿದೆ. ಸದ್ಯ ತಾಲೂಕಿನಾದ್ಯಂತ ಹಾಗೂ ಜಿಲ್ಲೆಯಾದ್ಯಂತ ಭಕ್ತಾದಿಗಳು ಬೈಪಾಸ್ ಗಣಪತಿಯ ದರ್ಶನಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಎಂದಿನಂತೆ ಇಲ್ಲಿ ಪ್ರತಿನಿತ್ಯ ವಿವಿಧ ಸಾಮೂಹಿಕ ಕಾರ್ಯಕ್ರಮಗಳನ್ನು ಈ ವರ್ಷವೂ ಹಮ್ಮಿಕೊಳ್ಳಲಾಗುತ್ತಿದೆ.
ಗಣೇಶ ನಿಮಜ್ಜನ ಕಾರ್ಯಕ್ರಮಕ್ಕೆ ಸುಮಾರು 10 ಸಾವಿರ ಜನ ಭಾಗಿಯಾಗುವ ನಿರೀಕ್ಷೆ ಇದೆ. ಹಾಗಾಗಿ ಅದಕ್ಕೂ ಭರದ ಸಿದ್ಧತೆ ಮಾಡಲಾಗುತ್ತದೆ. ಜಿಲ್ಲಾಡಳಿತ ನೀಡಿದ ಆದೇಶಗಳನ್ನು ಪಾಲಿಸಿ ಗಣಪನಿಗೆ ಪೂಜೆ ಮಾಡಲು ಅನುವು ಮಾಡಿಕೊಡಲಾಗುವುದು ಎಂದು ಗಣೇಶೋತ್ಸವ ಸಮಿತಿಯ ಸದಸ್ಯರು ಹೇಳಿದ್ದಾರೆ.
ಇದನ್ನೂ ಓದಿ: ಗೌರಿ ಗಣೇಶ ಹಬ್ಬಕ್ಕೆ ಕೆಎಸ್‌ಆರ್‌ಟಿಸಿ ಟಿಕೆಟ್ ದರದಲ್ಲಿ ರಿಯಾಯಿತಿ: 500 ಹೆಚ್ಚುವರಿ ಬಸ್ ನಿಯೋಜನೆ