ಚಿಕ್ಕಬಳ್ಳಾಪುರ: ಮಾಮೂಲಿ ಕೊಡಲಿಲ್ಲ ಎಂದು ವೃದ್ಧನ ಮೇಲೆ ಪೊಲೀಸ್ ಪೇದೆ ಪ್ರತಾಪ ತೋರಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂಬ ಆರೋಪ ಜಿಲ್ಲೆಯ ಗುಡಿಬಂಡೆ ತಾಲೂಕಿನ ಯರಲಕ್ಕೇನಹಳ್ಳಿ ಗ್ರಾಮದಲ್ಲಿ ಕೇಳಿಬಂದಿದೆ.
ಗ್ರಾಮದ ವೃದ್ಧ ನರಸಿಂಹಪ್ಪಗೆ ಪೇದೆ ಮುನಿರಾಜು ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ. ತಮ್ಮ ಅಂಗಡಿಯಲ್ಲಿ ನರಸಿಂಹಪ್ಪ ಮದ್ಯ ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಪೇದೆ ಮಾಮೂಲಿ ಪಡೆಯುತ್ತಿದ್ದರಂತೆ. ಹೀಗೆ 13 ಸಾವಿರ ರೂ. ಪಡೆದಿದ್ದಾರಂತೆ. ಮತ್ತೆ ಮಾಮೂಲಿ ಕೊಡಲ್ಲ ಎಂದಾಗ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ಮಾಮೂಲಿ ಕೊಡದ ಕಾರಣ ಪೇದೆ ಮನಬಂದಂತೆ ಥಳಿಸಿದ್ದಾರೆ ಎಂದು ನರಸಿಂಹಪ್ಪ ಮತ್ತು ಅವರ ಸೊಸೆ ಆರೋಪಿಸಿದ್ದಾರೆ.
ಇತ್ತ ಗುಡಿಬಂಡೆ ಪೊಲೀಸರು ಅಕ್ರಮ ಮದ್ಯ ಮಾರಾಟ ತಡೆಯಲು ಹೋದ ಪೊಲೀಸ್ ಪೇದೆಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ನರಸಿಂಹಪ್ಪನ ಮೇಲೆ ಕೇಸ್ ದಾಖಲಿಸಿದ್ದಾರೆ. ಸದ್ಯ ಪೊಲೀಸ್ ಏಟಿನಿಂದ ಗಾಯಗೊಂಡಿರುವ ನರಸಿಂಹಪ್ಪ ಗುಡಿಬಂಡೆ ತಾಲೂಕು ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.