ಚಿಕ್ಕಬಳ್ಳಾಪುರ: ಹಿಂದೂಪುರ-ಗೌರಿಬಿದನೂರು ನಡುವೆ ನಿತ್ಯ ಸಂಚರಿಸುತ್ತಿದ್ದ ಪ್ಯಾಸೆಂಜರ್ ರೈಲು ತಿಂಗಳಿನಿಂದ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಪ್ರಯಾಣಿಕರು ಇಂದು ಬೆಳಗ್ಗೆ ಏಕಾಏಕಿ ಬಸವ ಎಕ್ಸ್‌ಪ್ರೆಸ್ ರೈಲು ತಡೆದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಗೌರಿಬಿದನೂರು ಮಾರ್ಗವಾಗಿ ಸಂಚರಿಸುತ್ತಿದ್ದ ಹಿಂದೂಪುರ ಪ್ಯಾಸೆಂಜರ್ ರೈಲನ್ನು ಸಾವಿರಾರು ಪ್ರಯಾಣಿಕರು ಕೆಲಸ ಕಾರ್ಯಗಳ ನಿಮಿತ್ತ ಅವಲಂಬಿಸಿದ್ದರು. ಆದರೆ ಕಳೆದ ತಿಂಗಳಿನಿಂದ ರೈಲು ಸ್ಥಗಿತಗೊಂಡಿದ್ದು ಸಾವಿರಾರು ಜನ ಪ್ರಯಾಣಿಕರು ತಮ್ಮ ಬದುಕು ರೂಪಿಸಿಕೊಳ್ಳಲು ಹಾಗೂ ಕಾರ್ಖಾನೆಗೆ ಹೋಗಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಪ್ರಯಾಣಿಕರು ಸಂಬಂಧಪಟ್ಟ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ತಿಳಿಸಿದರೂ ಕೂಡ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿ ಇಂದು ಏಕಾಏಕಿ ರೈಲು ನಿಲ್ದಾಣಕ್ಕೆ ಲಗ್ಗೆಯಿಟ್ಟು 1 ಗಂಟೆಗಳ ಕಾಲ ರೈಲನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ವಿಷಯ ತಿಳಿದು ಸ್ಥಳಕ್ಕೆ ಗೌರಿಬಿದನೂರು ಪೊಲೀಸರು ಭೇಟಿ ನೀಡಿ ಪ್ರತಿಭಟನಾನಿರತ ಪ್ರಯಾಣಿಕರನ್ನು ಸಮಾಧಾನಪಡಿಸಿ, ರೈಲ್ವೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಗಿತು.