ಚಿಕ್ಕಬಳ್ಳಾಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆ ವತಿಯಿಂದ ರಾಷ್ಟ್ರೀಯ ತಂಬಾಕು ನಿಯಂತ್ರಣ ಜಾಥಾ ಕಾರ್ಯಕ್ರಮವನ್ನು ಚಿಕ್ಕಬಳ್ಳಾಪುರ ನಗರ ಹಾಗೂ ಗೌರಿಬಿದನೂರಿನಲ್ಲಿ ಏರ್ಪಡಿಸಲಾಗಿತ್ತು.
ಚಿಕ್ಕಬಳ್ಳಾಪುರ ನಗರದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಗೌರಿಬಿದನೂರಿನಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಲೋಕೇಶ್ ಚಾಲನೆ ನೀಡಿದ್ದು. ನಗರದ ಮುಖ್ಯ ರಸ್ತೆಗಳಲ್ಲಿ ಜಾಥ ಮಾಡಿ ತಂಬಾಕು ಸೇವನೆ ಹಾಗೂ ಮಾರಾಟವನ್ನು ಮಾಡದಂತೆ ಸಾರ್ವಜನಿಕರಿಗೆ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು.
ಆರೋಗ್ಯಾಧಿಕಾರಿ ಡಾ.ರತ್ನಮ್ಮ ಮಾತನಾಡಿ ಇತ್ತೀಚೆಗೆ ತಂಬಾಕು ಸೇವನೆ ಹೆಚ್ಚಾಗಿದ್ದು ತಂಬಾಕು ಸೇವನೆಯಿಂದ ಅನಾರೋಗ್ಯಕ್ಕೆ ಒಳಗಾಗುತ್ತಿರುವ ಪ್ರಕರಣಗಳು ಹೆಚ್ಚಿನದಾಗಿ ಬೆಳಕಿಗೆ ಬಂದಿದೆ. ತಾಲೂಕು ಆರೋಗ್ಯ ಇಲಾಖೆ ವತಿಯಿಂದ ಇತ್ತೀಚಿನ ಕೆಲ ದಿನಗಳಲ್ಲಿ ಪಟ್ಟಣದಲ್ಲಿ ಸಿಗರೇಟ್ ಸೇವನೆ ಮಾಡುತ್ತಿದ್ದ ವ್ಯಕ್ತಿಗಳಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಲಾಗಿತ್ತು ಹಾಗೂ ಶಾಲೆಯ ಸುತ್ತುಮುತ್ತು ನೂರು ಮೀಟರ್ ಅಂತರದಲ್ಲಿ ತಂಬಾಕು ಮತ್ತು ಸಿಗರೇಟ್ ಮಾರಾಟ ಮಾಡಿದ್ದಲ್ಲಿ ಹಾಗೂ ಸೇವನೆ ಮಾಡಿದಲ್ಲಿ ಕಾನೂನು ರೀತಿ ಕ್ರಮಗಳಿಗಾಗಿ ಎಚ್ಚರಿಕೆ ನೀಡಿದರು.
ಶಾಲಾ ಮಕ್ಕಳಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಿಗರೇಟ್ ಅಂಗಡಿಗಳಿಗೆ ತೆರಳಿ ಗುಲಾಬಿ ನೀಡುವ ಮೂಲಕ ಸಾರ್ವಜನಿಕರಲ್ಲಿ ಸಿಗರೇಟ್ ಸೇವನೆ ಹಾಗೂ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅರಿವು ಮೂಡಿಸುವ ಪ್ರಯತ್ನವನ್ನು ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ನಗರಸಭೆ ಅಧಿಕಾರಿಗಳು ಭಾಗಿಯಾಗಿದ್ದರು.