ಚಿಕ್ಕಬಳ್ಳಾಪುರ: ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರರನ್ನು ಎಂಎಲ್‌ಸಿ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಆಡಳಿತ ಪಕ್ಷದಲ್ಲೇ ಕೆಲವರು ಕೊಡಿ ಅಂತಾರೆ, ಕೆಲವರಿಂದ ವಿರೋಧವಿದೆ. ಈ ಬಗ್ಗೆ ರಾಜ್ಯದ ವರಿಷ್ಠರು, ಹೈಕಮಾಂಡ್ ಪರಿಶೀಲಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವರು. ಅವರಿಗೆ ಯಾವ ಸ್ಥಾನ ಕೊಟ್ಟರೂ ನಮಗೆ ಸಂತಸ ಎಂದು ಸೋಮವಾರ ಚಿಕ್ಕಬಳ್ಳಾಪುರದಲ್ಲಿ ಸಚಿವ ಎಂಟಿಬಿ ನಾಗರಾಜ್ ಹೇಳಿಕೆ ಕೊಟ್ಟಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ಅರಸನಹಳ್ಳಿ ಬಳಿ ಮಳೆಯಿಂದ ಹಾನಿಗೊಳಗಾದ ದ್ರಾಕ್ಷಿ ತೋಟಕ್ಕೆ ಭೇಟಿ ನೀಡಿದ ಸಚಿವರು ಸ್ಥಳದಲ್ಲೇ ನಷ್ಟಕ್ಕೀಡಾದ ರೈತನಿಗೆ ವೈಯಕ್ತಿಕವಾಗಿ 50 ಸಾವಿರ ರೂಪಾಯಿ ಪರಿಹಾರ ನೀಡಿದರು. ನಂತರ ಮಾಧ್ಯಮದ ಜೊತೆ ಮಾತನಾಡುತ್ತಾ, ಜಿಲ್ಲೆಯಲ್ಲಿ ಮಳೆ ಹಾನಿ ಬಗ್ಗೆ ಮಾಹಿತಿ ನೀಡದ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ಆಧಾರರಹಿತ ವರದಕ್ಷಿಣೆ ಕಿರುಕುಳ ಆರೋಪ: ಪ್ರಕರಣ ರದ್ದುಪಡಿಸಿದ ಹೈಕೋರ್ಟ್
ಬಿರುಗಾಳಿಸಹಿತ ಮಳೆಗೆ ಬೆಳೆ ಹಾನಿಯಾಗಿ ಒಂದು ವಾರ ಕಳೆದರೂ ನೆರವಿಗೆ ಬಾರದ ಉಸ್ತುವಾರಿ ಸಚಿವರ ವಿರುದ್ಧ ಆಕ್ರೋಶ ಬಗ್ಗೆ ಮಾತನಾಡುತ್ತಾ, ನಾನು ಹೈದರಾಬಾದ್ಗೆ ಹೋಗಿದ್ದೆ. ಜಿಲ್ಲಾಡಳಿತ, ಅಧಿಕಾರಿಗಳು ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿಲ್ಲ. ಮಾಧ್ಯಮಗಳಲ್ಲಿ ನೋಡಿ ವಿಷಯ ಗೊತ್ತಾಗಿದೆ. ಹೀಗಾಗಿ ಇಂದು ಇಲ್ಲಿಗೆ ಬಂದಿದ್ದೇನೆ ಎಂದು ತಿಳಿಸಿದರು.