ಚಿಕ್ಕಬಳ್ಳಾಪುರ: ಮೊಟ್ಟೆ ಹೊಡೆಯುವುದು, ಟೊಮೆಟೋ ಎಸೆಯುವುದು, ಗಲಭೆ ಮಾಡುವುದು, ಸರ್ಕಾರಿ ಹಾಗೂ ಸಾರ್ವಜನಿಕ ಆಸ್ತಿ ಹಾನಿ ಮಾಡುವುದನ್ನು ನಾನು ಖಂಡಿಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಚಿಕ್ಕಬಳ್ಳಾಪುರ ಇವರ ಸಂಯುಕ್ತಾಶ್ರಯದಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿ ಹಾಗೂ ಸಾಮಾಜಿಕ ಕ್ರಾಂತಿಯ ಹರಿಕಾರ ಮಾಜಿ ಮುಖ್ಯಮಂತ್ರಿಗಳಾದ ಡಿ.ದೇವರಾಜ ಅರಸು 107 ನೇ ಜನ್ಮ ದಿನಾಚರಣೆಯನ್ನ ಚಿಕ್ಕಬಳ್ಳಾಪುರ ನಗರದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಇದನ್ನೂ ಓದಿ: ಮೊಟ್ಟೆ ಪ್ರಕರಣವನ್ನು ಎಷ್ಟರ ಮಟ್ಟಿಗೆ ತೆಗೆದುಕೊಂಡು ಹೋಗಬೇಕೆನ್ನುವುದು ಅವರಿಗೆ ಬಿಟ್ಟಿದ್ದು: ಸಿಎಂ
ದೇವರಾಜ ಅರಸು ಅವರ 107 ನೇ ಜನ್ಮ ದಿನಾಚರಣೆ ಪ್ರಯುಕ್ತ ಖಾದಿ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಯನ್ನು ಉಸ್ತುವಾರಿ ಸಚಿವರು ಉದ್ಘಾಟನೆ ಮಾಡಿ 12,500 ರೂ.ಗಳ ಸೀರೆಯನ್ನ ಖರೀದಿಸಿದರು. ಸುಮಾರು 15 ಕ್ಕೂ ಹೆಚ್ಚು ಮಳಿಗೆಗಳಿಗೆ ಬೋಣಿ ಅಂತ 1,000 ರೂ. ಹಾಗು ಇನ್ನು ಕೆಲವು ಮಳಿಗೆಗಳಿಗೆ 500 ರೂ.ಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಂಟಿಬಿ ನಾಗರಾಜ್, ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿರುವುದನ್ನ ನಾನು ಖಂಡಿಸುತ್ತೇನೆ. ಯಾವ ಪಕ್ಷನೇ ಆಗಿರಲ್ಲಿ ಯಾವ ಸಂಘ ಸಂಸ್ಥೆಗಳೇ ಆಗಿರಲಿ ಈ ರೀತಿ ಮಾಡಬಾರದು, ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಕೂಡ ಪ್ರತಿಭಟನೆ ಮಾಡುವುದು, ಅವರ ಹಕ್ಕುಗಳನ್ನ ಪ್ರತಿಪಾದನೆ ಮಾಡುವುದಕ್ಕೆ ಹಕ್ಕಿದೆ. ಆದರೆ ಮೊಟ್ಟೆ ಹೊಡೆಯುವುದು, ಟೊಮೆಟೋ ಎಸೆಯುವುದು, ಗಲಭೆ ಮಾಡುವುದನ್ನು ನಾನು ಖಂಡಿಸುತ್ತೇನೆ ಎಂದರು. ಈ ವೇಳೆ ಜಿಲ್ಲಾಧಿಕಾರಿ ನಾಗರಾಜು ಎನ್. ಎಂ, ಜಿಲ್ಲಾ ವರಿಷ್ಠಾಧಿಕಾರಿ ಡಿ.ಎಲ್ ನಾಗೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದನ್ನೂ ಓದಿ:ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆತದ ಹಿಂದೆ ಡಿಕೆಶಿ ಇರಬೇಕು: ನಳಿನ್ ಕುಮಾರ್ ಕಟೀಲ್