ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ರಾಜೀನಾಮೆ ಪರ್ವ ಶುರುವಾಗಿದ್ದು, ಸಮ್ಮಿಶ್ರ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯಾಗಿ ಮಾರ್ಪಾಡಾಗುತ್ತಿದೆ. ಸದ್ಯ ಜಿಲ್ಲೆಯ ಅತೃಪ್ತ ಶಾಸಕರೊಬ್ಬರು ರಾಜೀನಾಮೆ ಕೊಡುವುದಾಗಿ ಸಮ್ಮಿಶ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ನಿನ್ನೆಯಷ್ಟೇ ಜಿಲ್ಲೆಯಲ್ಲಿ ಉತ್ತಮ ಮಳೆಗಾಗಿ ಪೂಜೆಗಳನ್ನು ನಡೆಸಿದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಈಗ ಬಾಗೇಪಲ್ಲಿ ಕ್ಷೇತ್ರಕ್ಕೆ ಹೆಚ್.ಎನ್. ವ್ಯಾಲಿ ನೀರು ಹರಿಸದಿದ್ರೆ ರಾಜೀನಾಮೆ ನಿಶ್ಚಿತ ಎಂದು ಹೇಳಿಕೆ ನೀಡಿದ್ದಾರೆ. ತಾಲೂಕಿನ ಚೇಳೂರುನಲ್ಲಿ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ನಂತರ ಮಾತನಾಡಿದ ಶಾಸಕರು, ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಹೆಚ್.ಎನ್. ವ್ಯಾಲಿ ನೀರು ಬರುತ್ತಿದೆ. ಆದರೆ ನಮ್ಮ ತಾಲೂಕಿಗೆ ಮಾತ್ರ ಇಲ್ಲ.
ಸದ್ಯ ತಾಲೂಕಿನಲ್ಲಿ 1000ರಿಂದ 15,000 ಅಡಿ ಕೊರೆದರು ನೀರು ಸಿಗುತ್ತಿಲ್ಲ. ಸಿಗುತ್ತಿರುವ ನೀರು ಫ್ಲೋರೋಸಿಸ್ನಿಂದ ಕೂಡಿದ್ದು, ಅನಾರೋಗ್ಯಕ್ಕೆ ಕಾರಣವಾಗುತ್ತಿದೆ. ನನಗೆ ಯಾವ ಮಂತ್ರಿ ಸ್ಥಾನ ಸಿಗದಿದ್ದರು ಪರವಾಗಿಲ್ಲ. ಹೆಚ್.ಎನ್. ವ್ಯಾಲಿ ನೀರು ನಮ್ಮ ಭಾಗಕ್ಕೆ ಹರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ಸಾರ್ವಜನಿಕರ ಎದುರು ಬಹಿರಂಗ ಹೇಳಿಕೆ ನೀಡಿದ್ದಾರೆ.