ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಲ್ಲ, ಅವರ ಮಗ ವಿಜಯೇಂದ್ರ ಎಂದು ಮಾಜಿ ಕೃಷಿ ಸಚಿವ ಹಾಗೂ ಗೌರಿಬಿದನೂರು ಶಾಸಕ ಎನ್.ಹೆಚ್.ಶಿವಶಂಕರ್ ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.
ಕಾಂಗ್ರೆಸ್ ಭದ್ರಕೋಟೆ ಎನಿಸಿಕೊಂಡಿರುವ ಗೌರಿಬಿದನೂರಿನಲ್ಲಿ ಶಾಸಕ ಶಿವಶಂಕರ್ ರೆಡ್ಡಿ ನೇತೃತ್ವದಲ್ಲಿ ಕೈ ಕಾರ್ಯಕರ್ತರು ಬೃಹತ್ ಮೆರವಣಿಗೆ ಮೂಲಕ ಕೇಂದ್ರ ಸರ್ಕಾರದ ವಿರುದ್ಧ 'ಮೋದಿ ಹಠಾವೋ ದೇಶ್ ಬಚಾವೋ' ಎಂಬ ಘೋಷಣೆಯೊಂದಿಗೆ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ರಾಜ್ಯದಲ್ಲಿ ಸರ್ಕಾರ ಹದಗೆಟ್ಟಿದ್ದು ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇಡೀ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಇಂತಹ ಭ್ರಷ್ಟಾಚಾರ ಇದ್ದು, ಅದೇ ರೀತಿ ನಮ್ಮ ಜಿಲ್ಲೆಯಲ್ಲಿಯೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ರಾಜ್ಯದಲ್ಲಿ ಎಲ್ಲಾ ಮಂತ್ರಿಗಳು ಅದರ ರೂವಾರಿಗಳಾಗಿದ್ದು, ವಸೂಲಿ ಮಾಡುವುದೇ ಕೆಲಸವಾಗಿದೆ ಎಂದು ದೂರಿದರು.
ಕಾಂಗ್ರೆಸ್ ಮುಳುಗುವ ಪಕ್ಷವಾಗಿದೆ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಪಕ್ಷಕ್ಕೇನು ಶಕ್ತಿ ಕುಂದಿಲ್ಲ. ಆದರೆ ಬಿಜೆಪಿ ಪಕ್ಷ ದೇಶವನ್ನು ಮುಳುಗಿಸುತ್ತಿದೆ. ನಾವೇನು ದೇಶವನ್ನು ಮುಳುಗಿಸಿರಲಿಲ್ಲ, ನಮ್ಮ ಸರ್ಕಾರದ ಅವಧಿಯಲ್ಲಿಯೂ ಕೆಲವರು ಭ್ರಷ್ಟಾಚಾರ ಮಾಡಿರಬಹುದು. ಆದರೆ ನಾವು ದೇಶ ಮುಳುಗಿಸುವ ಕೆಲಸ ಮಾಡಿರಲಿಲ್ಲ. ಕಾಂಗ್ರೆಸ್ ಪಕ್ಷಕ್ಕೆ 120 ವರ್ಷಗಳ ಇತಿಹಾಸವಿದೆ. ಅವರು ಎಷ್ಟೇ ಕಡಿದರು ಹಳೇ ಬೇರು ಚಿಗುರುತ್ತದೆ, ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದರು.
ಓದಿ: ರಾಜ್ಯದಲ್ಲಿ ಸೋಲಿನ ಹೊಣೆ ಹೊತ್ತು ಡಿಕೆಶಿ ರಾಜೀನಾಮೆ ನೀಡಬೇಕಿತ್ತು: ಈಶ್ವರಪ್ಪ