ಗೌರಿಬಿದನೂರು (ಚಿಕ್ಕಬಳ್ಳಾಪುರ): ಸೂಟ್‍ಕೇಸ್ ಹುಡುಕಿಕೊಂಡು ಹೋಗಿದ್ದು ಯಾರೆಂಬುದು ಇಡೀ ತಾಲೂಕಿನ ಜನತೆಗೆ ಗೊತ್ತಿದೆ ಎಂದು ಮಾಜಿ ಸಚಿವ ಹಾಗೂ ಗೌರಿಬಿದನೂರು ಶಾಸಕ ಎನ್.ಹೆಚ್. ಶಿವಶಂಕರರೆಡ್ಡಿ ಟಾಂಗ್ ನೀಡಿದ್ದಾರೆ.
ಕಳೆದ ಎರಡು ದಿನಗಳಿಂದ ತಾಲೂಕಿನಲ್ಲಿ ಸೂಟ್‍ಕೇಸ್ ರಾಜಕಾರಣದ ಆರೋಪ ಮತ್ತು ಪ್ರತ್ಯಾರೋಪದ ಬಗ್ಗೆ ಕಾಂಗ್ರೆಸ್ ತೊರೆದ ನಾಯಕರು ಶಾಸಕರ ಬಗ್ಗೆ ಟೀಕೆ ಮಾಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಶಿವಶಂಕರ್ ರೆಡ್ಡಿ, ಅಧಿಕಾರ ಮತ್ತು ಸೂಟ್‍ಕೇಸ್ ಹಿಂದೆ ಹೋಗುವ ಜಾಯಮಾನ ನನ್ನದಲ್ಲ ಎಂದು ತಿರುಗೇಟು ನೀಡಿದ್ದಾರೆ.
ನಾನು ಕೇವಲ ಜನ ಸೇವೆ ಮಾಡುವ ಸಲುವಾಗಿ ರಾಜಕೀಯಕ್ಕೆ ಬಂದಿರುವೆ. ಅದನ್ನು ಬಿಟ್ಟು ತಾಲೂಕಿನ ಕೆಲ ಡೋಂಗಿ ನಾಯಕರ ರಾಜಕೀಯ ಹೇಳಿಕೆ ಹಾಸ್ಯಾಸ್ಪದವಾಗಿದೆ, ಇದು ನಿಜಕ್ಕೂ ಲಜ್ಜೇಗೇಡಿತನ ಎಂದು ಕಿಡಿಕಾರಿದರು.
ಸಮಾಜ ಸೇವಕ ಪುಟ್ಟಸ್ವಾಮಿಗೌಡ ಬಣದ ಕೆಲ ಮುಖಂಡರು ತಮ್ಮ ಮೇಲೆ ಮಾಡಿರುವ ಅರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಾಸಕರು, ನಾನು ತಾಲೂಕಿನಲ್ಲಿ ಕಳೆದ ಎರಡು ದಶಕಗಳಿಂದ ಜನರ ಅಭಿಮಾನದಿಂದ ಸತತವಾಗಿ ಅಯ್ಕೆಯಾಗಿದ್ದೇನೆ. ಈ ಹಿಂದೆ ಬಿಜೆಪಿ ನಾಯಕರು ಸರ್ಕಾರ ರಚನೆ ಮಾಡುವ ಸಮಯದಲ್ಲಿ ಅಪರೇಷನ್ ಕಮಲ ಮಾಡುವ ದಿಸೆಯಲ್ಲಿ ಸೂಟ್ ಕೇಸ್ ನೀಡುವುದಾಗಿ ಒತ್ತಡ ಹೇರಿದ್ದರು. ಆಗ ಅದನ್ನೇ ತಿರಸ್ಕಾರ ಮಾಡಿದ್ದೆ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಗೆದ್ದು ಒಮ್ಮೆ ಉಪಾಸಭಾಧ್ಯಕ್ಷ ಮತ್ತು ಕೃಷಿ ಸಚಿವನಾಗಿ ಕಾರ್ಯನಿರ್ವಹಿಸಿದ್ದೇನೆ. ನಂಬಿಕೆ ದ್ರೋಹ ಮಾಡುವ ನೀಚ ಬುದ್ಧಿ ನನಗೆ ಬಂದಿಲ್ಲ. ನಾನು ಎಂದೆಂದಿಗೂ ಕಾಂಗ್ರೆಸ್ ಪಕ್ಷದಲ್ಲಿದ್ದು ಜನಸೇವೆ ಮಾಡುವೆ ಎಂದು ಸ್ಪಷ್ಟಪಡಿಸಿದ್ದಾರೆ.