ಚಿಕ್ಕಬಳ್ಳಾಪುರ : ವೈಕುಂಠ ಏಕಾದಶಿಯ ಪ್ರಯುಕ್ತ ಶಿಡ್ಲಘಟ್ಟ ಕ್ಷೇತ್ರದ ಶಾಸಕ ವಿ.ಮುನಿಯಪ್ಪ ಪತ್ನಿ ಸಮೇತರಾಗಿ ನಗರದ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿ ಶ್ರೀಗಳ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಕಳೆದ ಮೂರು ತಿಂಗಳಿಂದ ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದು, ಬೆಂಬಲಿಗರು ಹಾಗೂ ಮುಖಂಡರು ರಾಘವೇಂದ್ರಸ್ವಾಮಿ ಮಠದಲ್ಲಿ ಶಾಸಕರ ಆರೋಗ್ಯ ಚೇತರಿಕೆಗಾಗಿ ವಿಶೇಷ ಪೂಜೆ ಸಲ್ಲಿಸಿದ್ದರು. ಶಾಸಕರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ ಮೊದಲ ಬಾರಿಗೆ ಪತ್ನಿ ಸಮೇತ ಮಠಕ್ಕೆ ಭೇಟಿ ನೀಡಿದರು.
ನಂತರ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯಿಂದ ಮುತ್ತೂರು ರಸ್ತೆಯಲ್ಲಿ ನಡೆಯುತ್ತಿರುವ ಕಾಮಗಾರಿ ವೀಕ್ಷಿಸಿ ಕಾಮಗಾರಿ ಪ್ರಗತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಕ್ಷೇತ್ರದ ಅಭಿವೃದ್ಧಿಗಾಗಿ ಮುಂದಿನ ದಿನಗಳಲ್ಲಿ ಇನ್ನಷ್ಟು ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಎಸ್.ವಿ ನಾಗರಾಜ ರಾವ್, ಕಾರ್ಯದರ್ಶಿ ಎನ್ ಶ್ರೀಕಾಂತ್, ಸದಸ್ಯರಾದ ಬಿ. ಕೃಷ್ಣಮೂರ್ತಿ, ಬ್ರಾಹ್ಮಣ ಸಂಘದ ಅಧ್ಯಕ್ಷ ಎ ಎಸ್ ರವಿ ಮುಂತಾದವರು ಉಪಸ್ಥಿತರಿದ್ದರು.