ಚಿಕ್ಕಬಳ್ಳಾಪುರ: ವೀರ ಸಾವರ್ಕರ್ ಅಪ್ಪಟ ದೇಶಪ್ರೇಮಿ. ಸ್ವಾತಂತ್ರ್ಯಕ್ಕೆ ಆದರ್ಶದ ಹೋರಾಟ ಮಾಡಿದ್ದಾರೆ. ಯಾರಿಗಾದ್ರೂ ಅವರ ಬಗ್ಗೆ ತಿಳಿದುಕೊಳ್ಳಬೇಕು ಎಂಬ ಆಸಕ್ತಿ ಇದ್ರೆ ಹೇಳಿ, ನಾನೇ ಪುಸ್ತಕ ಖರೀದಿ ಮಾಡಿಕೊಡುತ್ತೇನೆ. ಸಾವರ್ಕರ್ ಪುಸ್ತಕ ಓದಿ ಎಂದು ಆರೋಗ್ಯ ಸಚಿವ ಡಾ ಸುಧಾಕರ್ ಚಿಕ್ಕಬಳ್ಳಾಪುರದಲ್ಲಿ ಹೇಳಿದರು.
ಶುಕ್ರವಾರ ಚಿಕ್ಕಬಳ್ಳಾಪುರ ತಾಲೂಕಿನಾದ್ಯಂತ ಹಲವು ಕಾರ್ಯಕ್ರಮಗಳಲ್ಲಿ ಸಚಿವರು ಪಾಲ್ಗೊಂಡರು. ಇದೇ ವೇಳೆ ವೀರ ಸಾವರ್ಕರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ವೀರ್ ಸಾವರ್ಕರ್ ಅಪ್ಪಟ ದೇಶ ಪ್ರೇಮಿ. ಸ್ವಾತಂತ್ರ್ಯಕ್ಕಾಗಿ ತಮ್ಮದೇ ಆದ ಹೋರಾಟ ನಡೆಸಿದ್ದಾರೆ. ಇದರಲ್ಲಿ ಯಾರಿಗಾದ್ರೂ ಭಿನ್ನಾಭಿಪ್ರಾಯಗಳಿದ್ರೆ ಅವರು ಸ್ವಾತಂತ್ರ್ಯದ ಬಗ್ಗೆ ಸರಿಯಾಗಿ ಓದಿಕೊಂಡಿರಲ್ಲ. ಅಂಥವರಿಗೆ ನಾನೇ ಪುಸ್ತಕಗಳನ್ನು ಕೊಡಿಸುವೆ. ಪುಸ್ತಕ ಓದಿದ ನಂತರ ಅವರು ಮಾತನಾಡಲಿ. ಈಗ ಅಜ್ಞಾನದಿಂದ ಯಾರೂ ಮಾತನಾಡುವುದು ಬೇಡ ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಮೊಟ್ಟೆ ಎಸೆದಿರುವುದು ಸರಿಯಿಲ್ಲ. ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸಲು ಸೂಕ್ತ ವೇದಿಕೆ ಇದೆ. ಮಾಜಿ ಮುಖ್ಯಮಂತ್ರಿಯ ಮೇಲೆ ಈ ರೀತಿ ಮಾಡಿರೋದು ಖಂಡನೀಯ. ಈಗಾಗಲೇ ಸಿ ಎಂ ಬೊಮ್ಮಾಯಿ, ಯಡಿಯೂರಪ್ಪನವರು ಇದನ್ನು ಖಂಡಿಸಿದ್ದಾರೆ. ಯಾರೇ ಆಗಲಿ ಈ ರೀತಿ ಮಾಡಿದ್ದು ತಪ್ಪು. ಮುಂದೆ ಈ ರೀತಿ ಆಗದ ಹಾಗೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಇದನ್ನೂ ಓದಿ: ಕೊಡಗಿನಲ್ಲಿ ಸಿದ್ದರಾಮಯ್ಯ ಕಾರಿಗೆ ಬಿಜೆಪಿಗರಿಂದ ಮೊಟ್ಟೆ ಎಸೆತ, ಕಪ್ಪು ಬಾವುಟ ಪ್ರದರ್ಶನ
ಜನೋತ್ಸವ ಬಗ್ಗೆ ಉಸ್ತುವಾರಿ ಅರುಣ್ ಸಿಂಗ್ ಜೊತೆ ಮಾತನಾಡಿದ್ದೇನೆ. ಹೆಸರು, ಸ್ಥಳ, ದಿನಾಂಕ, ನಿಗದಿ ಮಾಡಲು ಹೇಳಿದ್ದಾರೆ. ಆದರೆ ಯಾವ ರಾಷ್ಟ್ರೀಯ ನಾಯಕರು ಭಾಗವಹಿಸುತ್ತಾರೆ ಎಂಬುದು ಖಚಿತ ಪಡಿಸಬೇಕಿದೆ. ಫೋನ್ ಮೂಲಕ ಎಲ್ಲ ಮಾಹಿತಿ ಕೊಡ್ತೇನೆ ಅಂತ ಹೇಳಿದ್ದಾರೆ. ರಾಜ್ಯಾಧ್ಯಕ್ಷರು ರಾಷ್ಟ್ರೀಯ ನಾಯಕರ ಜೊತೆ ಸಂಪರ್ಕದಲ್ಲಿದ್ದಾರೆ. ಎಲ್ಲಾ ಖಚಿತವಾದ ಮೇಲೆ ಮಾಧ್ಯಮದವರಿಗೆ ತಿಳಿಸುತ್ತೇವೆ ಎಂದರು.