ಚಿಕ್ಕಬಳ್ಳಾಪುರ: ನೀರಿಗೆ ಬರ ಇರುವ ಬರಪೀಡಿತ ಜಿಲ್ಲೆ ಶೈಕ್ಷಣಿಕವಾಗಿ ಸಾಧನೆ ಮಾಡಿರುವುದು ಖುಷಿ ತಂದಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಹಾಗೂ ಚಿಕ್ಕಬಳ್ಳಾಪುರ ಶಾಸಕ ಡಾ. ಕೆ. ಸುಧಾಕರ್ ಸಂತಸ ವ್ಯಕ್ತಪಡಿಸಿದ್ದಾರೆ. ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಇದೇ ಮೊದಲ ಬಾರಿಗೆ ಚಿಕ್ಕಬಳ್ಳಾಪುರ ಜಿಲ್ಲೆ ಮೊದಲ ಸ್ಥಾನ ಬಂದಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ಎಸ್ಎಸ್ಎಲ್ಸಿಯಲ್ಲಿ ಜಿಲ್ಲೆ ಫಸ್ಟ್ ಬಂದಿದೆ. ಕಳೆದ ವರ್ಷ ನಮ್ಮ ಜಿಲ್ಲೆ ಫಲಿತಾಂಶದಲ್ಲಿ 20ನೇ ಸ್ಥಾನದಲ್ಲಿ ಇತ್ತು ಎಂದರು.
ನಾನು ಜಿಲ್ಲಾ ಉಸ್ತುವಾರಿ ಸಚಿವನಾದ ನಂತರ 10 ಸ್ಥಾನಗಳನ್ನಾದರೂ ಜಿಲ್ಲೆಗೆ ತರಬೇಕೆಂಬ ಆಸೆಯಿತ್ತು. ನಮಗೆ ರಾಜ್ಯಕ್ಕೆ ಮೊದಲು ಬರುತ್ತೇವೆ ಎಂಬ ನಿರೀಕ್ಷೆಯಿರಲಿಲ್ಲ ಎಂದರು.
ಸಂಪನ್ಮೂಲ ವ್ಯಕ್ತಿಗಳನ್ನು ಗುರುತಿಸಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿಸಿದ್ದೆವು. ಅಲ್ಲದೆ ನಮ್ಮ ಜಿಲ್ಲೆಯ ಶಿಕ್ಷಕರಿಗೆ ಟಿಟಿಪಿ (ಟೆನ್ ಟೈಂ ಪ್ರಾಕ್ಟೀಸ್) ಅನ್ನೋ ಪರಿಕಲ್ಪನೆ ತಂದು ಒಂದು ವಿಚಾರವನ್ನು 10 ಬಾರಿ ಹೇಳಿಸುವ ಕ್ರಮ ಜಾರಿ ಮಾಡಿದ್ದೆವು. ಈ ವಿಧಾನದಿಂದಲೇ ನಾವು ಈ ಸಾಧನೆ ಮಾಡಿದ್ದೇವೆ ಎಂದರು.
20ನೇ ಸ್ಥಾನದಿಂದ ಈ ಹಂತಕ್ಕೆ ಬಂದಿದ್ದೇವೆ. ಉಡುಪಿ, ದ.ಕ, ಉ. ಕನ್ನಡದಂತ ಜಿಲ್ಲೆಗಳು ಈ ಸಾಧನೆ ಮಾಡುತ್ತಿದ್ದವು. ವಾಡಿಕೆಯಂತೆಯೇ ಇದು ನಡೆದು ಬರುತ್ತಿತ್ತು. ಆದರೆ ಈಗ ನಾವು ಅವೆಲ್ಲವನ್ನು ಮೀರಿಸಿ ಸಾಧಿಸಿದ್ದೇವೆ. ಮೊದಲ ಸ್ಥಾನವನ್ನು ನಾವು ನಿರೀಕ್ಷೆ ಮಾಡಿರಲಿಲ್ಲ. ಈ ನೂತನ ಮಾಡೆಲ್ನಿಂದ ಈ ಹಂತ ತಲುಪಿದ್ದೇವೆ ಎಂದರು.
ಇದಲ್ಲದೆ ಫಲಿತಾಂಶದಲ್ಲಿ ಅನುತೀರ್ಣರಾದವರು ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ ಎಂದು ಧೈರ್ಯ ತುಂಬಿದರು.