ಚಿಕ್ಕಬಳ್ಳಾಪುರ : ಸಿನಿಮಾ ಅನ್ನೋದು ಗಾಜಿನ ಮನೆಯಿದ್ದಂತೆ. ಅದಕ್ಕೆ ಅವರನ್ನು ಬೇಗ ಹಿಡಿದಿದ್ದಾರೆ. ಉಳಿದ ಎಲ್ಲಾ ರಂಗಗಳಲ್ಲಿಯೂ ಡ್ರಗ್ಸ್ ದಂಧೆ ನಡೆಯುತ್ತಿದೆ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಜಿಲ್ಲೆಯ ಚಿಂತಾಮಣಿಯಲ್ಲಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಕೃಷಿ ಹಾಗೂ ರೇಷ್ಮೆ ವಿದ್ಯಾಲಯಕ್ಕೆ ಭೇಟಿ ನೀಡಿದ್ದ ವೇಳೆ ಮಾಧ್ಯಮಗಳಿಗೆ ಉತ್ತರಿಸಿದ ಅವರು, ಈ ಬಾರಿ ಉತ್ತಮ ಮಳೆಯಾಗಿದ್ದು, ಉತ್ತಮ ಬೆಳೆಯೂ ಬಂದಿದೆ. 2007ರಲ್ಲಿ ಶೇ.97ರಷ್ಟು ಬೆಳೆಯಾಗಿತ್ತು. 2020ರಲ್ಲಿ 101% ಬೆಳೆಯಾಗಿದೆ ಎಂದು ತಿಳಿಸಿದರು. 47%ರಷ್ಟು ರೈತರು ತಮ್ಮ ಹೊಲಗಳಲ್ಲಿ ಬೆಳೆ ಸಮೀಕ್ಷೆ ನಡೆಸಿದ್ದಾರೆ.
ಈ ಯೋಜನೆಗೆ ಕೇಂದ್ರ ಸರ್ಕಾರವೂ ಮೆಚ್ಚುಗೆ ವ್ಯಕ್ತಪಡಿಸಿದೆ. ಮುಂದಿನ ದಿನಗಳಲ್ಲಿ ದೇಶಾದ್ಯಂತ ಜಾರಿಗೆ ತರುವುದಾಗಿ ಸೂಚಿಸಿದ್ದು, ಯಡಿಯೂರಪ್ಪನವರ ಸರ್ಕಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಕ್ರಮ ಗೊಬ್ಬರ ಮಾರಾಟ ಮಾಡುತ್ತಿದ್ದ ಸುಮಾರು 117 ಅಂಗಡಿಗಳ ರದ್ದು ಮಾಡಿ ಕ್ರಿಮಿನಲ್ ಕೇಸ್ ದಾಖಲಿಸಲಾಗುತ್ತಿದೆ. ತಪ್ಪು ಮಾಡಿದ್ರೆ ಎಲ್ಲರಿಗೂ ದಡಂ ದಶಗುಣಂ ಎಂದರು.
ಎಂಟಿಬಿ ನಾಗರಾಜ್, ಆರ್.ಶಂಕರ್‌ಗೆ ಮಂತ್ರಿ ಮಾಡ್ಲೇಬೇಕು. ಬಿಜೆಪಿ ಸರ್ಕಾರ ಆಡಳಿತ ಬರುವುದಕ್ಕೆ ತಮ್ಮ ಸಚಿವ ಸ್ಥಾನ ತ್ಯಾಗ ಮಾಡಿ ಬಂದಿದ್ದಾರೆ. ಯಡಿಯೂರಪ್ಪನವರು ಮನಸ್ಸು ಮಾಡಿದ ತಕ್ಷಣ, ಅಧಿವೇಶನ ಮುಗಿದ ಬಳಿಕ ಸಚಿವ ಸಂಪುಟ ಸೇರಲಿದ್ದಾರೆ. ಯಡಿಯೂರಪ್ಪ ನುಡಿದಂತೆ ನಡೆದುಕೊಳ್ತಾರೆ. ಎಲ್ಲರಿಗೂ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ಎಂದರು.
ಸಿಎಂ ದೆಹಲಿ ಭೇಟಿ: ದೆಹಲಿಗೆ ಆರು ತಿಂಗಳಿಂದ ಹೋಗಿರಲಿಲ್ಲ. ಲಾಕ್‌ಡೌನ್ ಬಳಿಕ ಮೊದಲ ಬಾರಿಗೆ ಹೋಗಿದ್ದಾರೆ. ಯಡಿಯೂರಪ್ಪ ದೆಹಲಿ ಪ್ರವಾಸಕ್ಕೆ ಹೊಸ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ. ನೆರೆ, ಅನುದಾನ, ಜಿಎಸ್ಟಿ ವಿಚಾರ ಹಾಗೂ ರಾಜ್ಯದ ಅಭಿವೃದ್ಧಿ ಬಗ್ಗೆ ಕೇಂದ್ರ ಸಚಿವರುಗಳ ಭೇಟಿಗೆ ತೆರಳಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಸಿನಿಮಾ ನಟ-ನಟಿಯರ ಡ್ರಗ್ಸ್: ಡ್ರಗ್ಸ್ ಅನ್ನೋದು ಎಲ್ಲಾ ರಂಗದಲ್ಲೂ ಇದೆ. ಸಿನಿಮಾ ರಂಗದಲ್ಲಿ ಮಾತ್ರ ಇಲ್ಲ. ಸಿನಿಮಾದವರು, ಸಿನಿರಂಗ ಅನ್ನೋದು ಗಾಜಿನ ಮನೆ ಇದ್ದಂತೆ. ಅದಕ್ಕೆ ಅವರನ್ನು ಹಿಡಿದು ಬಿಟ್ರು. ಆದರೆ, ರಾಜಕೀಯ, ವ್ಯಾಪಾರಸ್ಥರು, ಅಧಿಕಾರಿ ವರ್ಗ, ಐಟಿ-ಬಿಟಿಯಲ್ಲೂ ಇದೆ. ರಾಗಿಣಿ ಆರೋಪಿ ನಂಬರ್ 2, ಆರೋಪಿ ನಂಬರ್ 1 ತೋರಿಸ್ತಾನೆ ಇಲ್ಲ. ಬರೀ ರಾಗಿಣಿ, ಸಂಜನಾ ಮಾತ್ರ ತೋರಿಸ್ತೀರಾ, ಉಳಿದೋರನ್ನ ತೋರಿಸ್ತಿಲ್ಲ. ಸಮಾಜ ಹುಟ್ಟಿದಾಗಿನಿಂದ ದಾಸ್ಯಗಳು ಇವೆ. ಅದಕ್ಕೆ ಬ್ರೇಕ್ ಹಾಕೋ ಕೆಲಸ ನಮ್ಮ ಸರ್ಕಾರ ಮಾಡ್ತಿದೆ ಎಂದು ಹೇಳಿಕೆ ನೀಡಿದ್ದಾರೆ.