ಚಿಕ್ಕಬಳ್ಳಾಪುರ : ಹೆದ್ದಾರಿ ಬದಿ ನಿಂತಿದ್ದ ಸಿಮೆಂಟ್ ಬಲ್ಕರ್ ಲಾರಿಗೆ ಟಾಟಾ ಸುಮೊ ಡಿಕ್ಕಿ ಹೊಡೆದ ಪರಿಣಾಮ ಮಕ್ಕಳು ಸೇರಿ 12 ಮಂದಿ ಸಾವನ್ನಪ್ಪಿರುವ ಘಟನೆ ಇಂದು ಬೆಳಗ್ಗೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಇಲ್ಲಿನ ಹೊರವಲಯದ ರಾಷ್ಟ್ರೀಯ ಹೆದ್ದಾರಿ 44ರ ಚಿತ್ರಾವತಿ ಎಂಬಲ್ಲಿ ಅಪಘಾತ ನಡೆದಿದ್ದು, ಟಾಟಾ ಸುಮೋದಲ್ಲಿದ್ದ 12 ಮಂದಿ ಮೃತಪಟ್ಟಿದ್ದಾರೆ. ಇನ್ನು, ಮೂವರ ಸ್ಥಿತಿ ಗಂಭೀರವಾಗಿದ್ದು, ಗಾಯಾಳುಗಳನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಮೃತರೆಲ್ಲರೂ ಆಂಧ್ರಪ್ರದೇಶದವರು ಎಂದು ತಿಳಿದು ಬಂದಿದೆ. ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ಟಾಟಾ ಸುಮೊದಲ್ಲಿ 15 ಮಂದಿ ಪ್ರಯಾಣಿಸುತ್ತಿದ್ದರು.
ಭೀಕರ ಅಪಘಾತದಲ್ಲಿ ಇಬ್ಬರು ಮಹಿಳೆಯರು ಮತ್ತು 10 ಪುರುಷರು ಮೃತಪಟ್ಟಿದ್ದಾರೆ. ಸಂತ್ರಸ್ತರು ಆಂಧ್ರಪ್ರದೇಶ ಗೋರಂಟ್ಲಾ ಮೂಲದವರಾಗಿದ್ದು, ಬೆಂಗಳೂರಿನ ಹೊಂಗಸಂದ್ರದಲ್ಲಿ ವಾಸವಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಐವರು ಸ್ಥಳದಲ್ಲೇ ಮೃತಪಟ್ಟರೆ, ಏಳು ಮಂದಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಡಿಕ್ಕಿಯ ರಭಸಕ್ಕೆ ಕಾರಿನ ಬಾಗಿಲುಗಳು ಜಖಂಗೊಂಡಿದ್ದು, ಸ್ಥಳೀಯರು ಮತ್ತು ಪೊಲೀಸರು ಸಂತ್ರಸ್ತರನ್ನು ರಕ್ಷಿಸಲು ಬಾಗಿಲುಗಳನ್ನು ಒಡೆಯಬೇಕಾಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಉಳಿದ ಮೂವರು ಗಂಭೀರವಾಗಿದ್ದು, ಅವರಿಗೆ ಸ್ಥಳೀಯ ಆಸ್ಪತ್ರೆಗಳಲ್ಲಿ ಸದ್ಯಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಭೇಟಿ ನೀಡಿದ ಚಿಕ್ಕಬಳ್ಳಾಪುರ ಎಸ್ಪಿ: ಈ ಪ್ರಯಾಣಿಕರು ಟಾಟಾ ಸುಮೊದಲ್ಲಿ ಆಂಧ್ರಪ್ರದೇಶದಿಂದ ಬೆಂಗಳೂರಿಗೆ ತೆರಳುವಾಗ ಚಿತ್ರಾವತಿ ಬಳಿ ಸಿಮೆಂಟ್ ಬಲ್ಕರ್ ಲಾರಿಗೆ ಹಿಂದಿನಿಂದ ಡಿಕ್ಕಿಯಾಗಿದೆ. ದಟ್ಟ ಮಂಜು ಕವಿದಿದ್ದರಿಂದ ಅಪಘಾತ ಸಂಭವಿಸಿರುವ ಸಾಧ್ಯತೆ ಇದೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್ ಡಿ ಎಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಘಟನೆ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಿಷ್ಟು: ಈ ಬಗ್ಗೆ ಮಾತನಾಡಿರುವ ಅವರು ಭೀಕರ ದುರಂತದಲ್ಲಿ 12 ಜನ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಟಾಟಾ ಸುಮೋ ಆಂಧ್ರಪ್ರದೇಶ ಕಡೆಯಿಂದ ಬರುತ್ತಿತ್ತು. ಮೃತರ ಗುರುತು ಪತ್ತೆಯಾಗಿಲ್ಲ. ಮೃತರು ಎಲ್ಲಿಯವರು ಎಂಬುದನ್ನು ಪತ್ತೆಹಚ್ಚಲಾಗುತ್ತಿದೆ. ದಟ್ಟವಾದ ಮಂಜು ಮುಸುಕಿದ್ದರಿಂದ ಈ ಅಪಘಾತ ಸಂಭವಿಸಿರಬಹುದು ಎಂದು ನಂಬಲಾಗಿದೆ. ಅಪಘಾತಕ್ಕೆ ಕಾರಣ ಏನು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ನಾಗೇಶ್ ಡಿ ಎಲ್ ಹೇಳಿದ್ದಾರೆ.
ಇದನ್ನೂ ಓದಿ : ಆನೇಕಲ್: ಡಿಯೋ ಬೈಕ್‌ಗಳಿಗೆ ಕನ್ನ ಹಾಕುತ್ತಿದ್ದ ಆರೋಪಿ ಸೆರೆ