ಚಿಕ್ಕಬಳ್ಳಾಪುರ: ಮದುವೆ ಗೊಂದಲದಲ್ಲಿ ಕಲ್ಯಾಣ ಮಂಟಪದಲ್ಲೇ ಬಿಟ್ಟು ಹೋಗಿದ್ದ ಬಂಗಾರದ ಒಡವೆಗಳನ್ನು ಕಲ್ಯಾಣ ಮಂಟಪದ ಸಿಬ್ಬಂದಿ ಮಾಲೀಕರಿಗೆ ಹಿಂದುರುಗಿಸುವ ಮೂಲಕ ಪ್ರಾಮಾಣಿಕತೆ ಮರೆದಿದ್ದಾರೆ.
ಜಿಲ್ಲೆಯ ಚಿಂತಾಮಣಿ ನಗರದ ಕೆ.ಎಂ.ಡಿ ಕಲ್ಯಾಣ ಮಂಟಪದಲ್ಲಿ ಡಿ.15, 16 ರಂದು ಮದುವೆ ಸಮಾರಂಭ ನಡೆದಿತ್ತು. ಮದುವೆಗೆ ಬಂದಿದ್ದ ವರನ ಸಂಬಂಧಿಕರೊಬ್ಬರು 10 ಲಕ್ಷ ರೂ ಮೌಲ್ಯದ 200 ಗ್ರಾಂ ಬಂಗಾರದ ಒಡವೆ, 1 ಮೊಬೈಲ್, 2 ಸಾವಿರ ರೂ ನಗದು ಹಣವಿದ್ದ ಬ್ಯಾಗ್ನ್ನು ಅವಸರದಲ್ಲಿ ಕಲ್ಯಾಣ ಮಂಟಪದಲ್ಲಿ ಬಿಟ್ಟು ಹೋಗಿದ್ದರು.
ಮದುವೆ ಮುಗಿದ ನಂತರ ಕಲ್ಯಾಣ ಮಂಟಪದ ಸಿಬ್ಬಂದಿ ಮಾದಪ್ಪ ಎಂಬುವವರು ಸ್ವಚ್ಚಗೊಳಿಸುತ್ತಿದ್ದ ವೇಳೆ ಬ್ಯಾಗ್ವೊಂದು ಸಿಕ್ಕಿತ್ತು. ಬಳಿಕ ಬ್ಯಾಗ್ ತೆರೆದು ನೋಡಿದಾಗ ಅದರಲ್ಲಿ ಬಂಗಾರ ಸೇರಿದಂತೆ ಮೊಬೈಲ್ ಫೋನ್ ಮತ್ತು ನಗದು ಹಣ ಪತ್ತೆಯಾಗಿದ್ದವು. ಬಳಿಕ ಬ್ಯಾಗ್ ಅನ್ನು ಮಂಟಪದಲ್ಲಿ ಭದ್ರವಾಗಿಟ್ಟು, ಮಂಟಪದ ಮಾಲೀಕ ಮಂಜುನಾಥ್‌ಗೆ ವಿಷಯ ತಿಳಿಸಿದ್ದಾರೆ.
ಇನ್ನು ಕಳೆದು ಹೋದ ಒಡವೆಗಳನ್ನು ಹುಡುಕುತ್ತಾ ಮಾಲೀಕರು ಕಲ್ಯಾಣ ಮಂಟಪ್ಪಕ್ಕೆ ಬಂದು ವಿಚಾರಿಸಿದ ವೇಳೆ ಮಾದಪ್ಪ ಬ್ಯಾಗ್ ಹಾಗೂ ಒಡವೆಗಳನ್ನು ಭದ್ರವಾಗಿಟ್ಟಿರುವುದು ತಿಳಿದು ಬಂದಿದೆ. ಕೆಎಂಡಿ ಕಲ್ಯಾಣ ಮಂಟಪದ ಮಾಲೀಕ ಮಂಜುನಾಥ್ ಚಿಂತಾಮಣಿ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ರಂಗಸ್ವಾಮಯ್ಯ ನವರ ಸಮ್ಮುಖದಲ್ಲಿ ಮಾಲೀಕರಿಗೆ ಒಡವೆಗಳನ್ನು ಹಿಂದಿರುಗಿಸಿದರು. ಬಳಿಕ ಕುಟುಂಬಸ್ಥರು ಹಾಗೂ ಪೊಲೀಸ್ ಅಧಿಕಾರಿ ಮಾದಪ್ಪ ಮತ್ತು ಮಂಜುನಾಥ್ ಅವರಿಗೆ ಸನ್ಮಾನಿಸಿ ಅಭಿನಂದಿಸಿದ್ದಾರೆ.
ಇದನ್ನೂ ಓದಿ: ನಡು ರಾತ್ರಿ ಕೆಟ್ಟು ನಿಂತ ಶಾಲಾ ಮಕ್ಕಳ ಬಸ್ : ರಿಪೇರಿ ಮಾಡಿಸಿ ಮಾನವೀಯತೆ ಮೆರೆದ ಪಿಎಸ್ಐ