ಚಿಕ್ಕಬಳ್ಳಾಪುರ: ಚಾಲಕನ ನಿಯಂತ್ರಣ ತಪ್ಪಿ ಲಾರಿ ಟೀ ಅಂಗಡಿಗೆ ನುಗ್ಗಿದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 7 ರ ಚದುಲಪುರ ಗೇಟ್ ಬಳಿ ನಡೆದಿದೆ.
ಚಿಕ್ಕಬಳ್ಳಾಪುರದ ವಕೀಲ ಯಾಮಣ್ಣಾಚಾರಿ (45) ಹಾಗೂ ಬೆಂಗಳೂರಿನ ಕಲಾಂಜೀ ಎಂಬ ಇಬ್ಬರು ವ್ಯಕ್ತಿಗಳ ಗುರುತು ಪತ್ತೆಯಾಗಿದ್ದು, ಇನ್ನಿಬ್ಬರ ಗುರುತು ಸಿಕ್ಕಿಲ್ಲ. ಬೆಂಗಳೂರಿನಿಂದ ವೇಗವಾಗಿ ಬರುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ ಬಳಿಯಿದ್ದ ಕೃಷ್ಣ ಕಾಂಡಿಮೆಂಟ್ಸ್ ಎಂಬ ಅಂಗಡಿಗೆ ನುಗ್ಗಿದೆ. ಪರಿಣಾಮ ಅಂಗಡಿ ಮುಂದೆ ಟೀ ಕುಡಿಯುತ್ತಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದ್ದು, ರಸ್ತೆ ಪಕ್ಕದಲ್ಲಿದ್ದ ಮೂರು ಕಾರುಗಳು ಜಖಂಗೊಂಡಿವೆ.
ಘಟನಾ ಸ್ಥಳಕ್ಕೆ ನಂದಿಗಿರಿಧಾಮ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.