ಚಿಕ್ಕಬಳ್ಳಾಪುರ: ಕುಬ್ಜ ಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಗಮನ ಸೆಳೆದ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೈವಾರ ಕ್ಷೇತ್ರದಲ್ಲಿ ನಡೆದಿದೆ. ಈ ವಿಶಿಷ್ಟ ಜೋಡಿಗೆ ಶುಭಾಶಯಗಳ ಸುರಿಮಳೆಯೇ ಹರಿದು ಬಂದಿದೆ.
ವಿವಾಹ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂದು ಹೇಳಲಾಗುತ್ತದೆ. ನಿನ್ನೆ (ಭಾನುವಾರ) ಕಲ್ಯಾಣ ನಗರಿ ಶ್ರೀ ಕ್ಷೇತ್ರ ಕೈವಾರದಲ್ಲಿ ಅಪರೂಪದ ಮದುವೆಯೊಂದು ನಡೆಯಿತು.
ಬೆಂಗಳೂರಿನ ವಿಷ್ಣು (28) ಕೋಲಾರ ಮೂಲದ ಜ್ಯೋತಿ (25) ಎಂಬ ಯುವತಿಯನ್ನು ವರಿಸಿದನು. ಇಬ್ಬರೂ ಪದವೀಧರರಾಗಿದ್ದು, ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ.
ವಿಶೇಷವಾಗಿ ಕಂಡ ಈ ಅಪರೂಪದ ಜೋಡಿ ಕ್ಷೇತ್ರಕ್ಕೆ ಬಂದ ಭಕ್ತಾದಿಗಳನ್ನು ಆಕರ್ಷಿಸಿದ್ದಾರೆ. ಕುಬ್ಜ ಜೋಡಿಗೆ ಮದುವೆ ಆಗುವುದು ತುಂಬಾ ವಿರಾಳ. ಸಾಕಷ್ಟು ದಿನಗಳಿಂದ ಹುಡುಗ ಹಾಗೂ ಹುಡುಗಿಯ ಪೋಷಕರು ಹುಡುಕಾಟದಲ್ಲಿ ನಿರತರಾಗಿದ್ದರು.
ಆದರೆ, ಕುಬ್ಜ ಎಂಬ ಕಾರಣಕ್ಕಾಗಿ ಸಾಕಷ್ಟು ನಿರಾಕರಣೆಗೊಂಡಿದ್ದವು. ಆದರೆ, ಈಗ ಇಬ್ಬರ ಕುಟುಂಬಗಳಿಗೂ ಒಬ್ಬರಿಗೊಬ್ಬರ ಮಾಹಿತಿ ಲಭ್ಯವಾಗಿದ್ದು, ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಹಸೆಮಣೆ ಏರಿದ ಕುಬ್ಜ ಜೋಡಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಫೋಟೋಗಳಿಗೂ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ: ಬಾಗಲಕೋಟೆ ಸಾಮೂಹಿಕ ವಿವಾಹದಲ್ಲಿ ಗಮನ ಸೆಳೆದ ಕುಬ್ಜ ಜೋಡಿ‘