ಗುಡಿಬಂಡೆ(ಚಿಕ್ಕಬಳ್ಳಾಪುರ): ತಾಲೂಕಿನ ಬ್ರಾಹ್ಮಣರ ಹಳ್ಳಿ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ನೆರವೇರಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರಾಹ್ಮಣರ ಹಳ್ಳಿ ಗ್ರಾಮವನ್ನು ಗ್ರಾಮ ವಿಕಾಸ ಯೋಜನೆಯಡಿ ಸುಮಾರು 2 ಕೋಟಿ ಅನುದಾನದಲ್ಲಿ ಸಮಗ್ರ ಅಭಿವೃದ್ಧಿ ಮಾಡಲಾಗುತ್ತದೆ. ಈ ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುದಾನ ನೀಡಲಿವೆ. ಗ್ರಾಮದಲ್ಲಿ ಚರಂಡಿ, ಕುಡಿಯುವ ನೀರು, ರಸ್ತೆಗಳು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುತ್ತದೆ. ಜೊತೆಗೆ ಗ್ರಾಮದಲ್ಲಿನ ಎಲ್ಲಾ ಮನೆ ಮನೆಗೂ ರೇಷನ್ ಕಾರ್ಡ್, ವೃದ್ಧಾಪ್ಯ ವೇತನ, ಅಂಗವಿಕಲರ ವೇತನ ಮೊದಲಾದ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ಗ್ರಾಮ ವಿಕಾಸ ಯೋಜನೆಯಡಿ ತಾಲೂಕಿನ ಧೂಮಕುಂಟಹಳ್ಳಿ ಹಾಗೂ ಬೆಣ್ಣೆಪರ್ತಿ ಗ್ರಾಮವನ್ನೂ ಸಹ ಕೇಂದ್ರ ಸರ್ಕಾರವೇ ಸರ್ವೆ ನಡೆಸಿ ಆಯ್ಕೆ ಮಾಡಿದ್ದು, ಆ ಗ್ರಾಮಗಳಲ್ಲಿ ಕೂಡ ಸಮಗ್ರ ಅಭಿವೃದ್ಧಿ ಕೈಗೊಳ್ಳಲಾಗುತ್ತದೆ ಎಂದರು.
ನಂತರ ತಾಲೂಕಿನ ಸೋಮಲಾಪುರ ಬಳಿ ಸುಮಾರು 1.87 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಸುಬ್ಬರಾಯನ ಕುಂಟೆಯ ಕಟ್ಟೆಯ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದರು. ಉಲ್ಲೋಡು ವ್ಯಾಪ್ತಿಯ ಅನೇಕ ಹಳ್ಳಿಗಳಿಗೆ ನೀರು ಪೂರೈಸುವ ಸಲುವಾಗಿ ಈ ಸುಬ್ಬಾರಾಯನ ಕುಂಟೆಯನ್ನು ಅಭಿವೃದ್ಧಿ ಮಾಡಿದ್ದು, ಕಾಮಗಾರಿ ಅಚ್ಚುಕಟ್ಟಾಗಿ ನಡೆದಿದೆ. ಕಾಮಗಾರಿಯಿಂದ ಈ ಹಿಂದಿನ ಶೇಖರಣೆಗಿಂತ ಆರು ಪಟ್ಟು ಹೆಚ್ಚು ನೀರು ಶೇಖರಣೆಯಾಗುತ್ತಿದೆ. ಈ ಕುಂಟೆ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವುದರಿಂದ ಕಾಡು ಪ್ರಾಣಿಗಳಿಗೂ ಸಹ ಅನುಕೂಲವಾಗಿದೆ ಎಂದು ತಿಳಿಸಿದರು.
ಜೊತೆಗೆ ಈ ಪ್ರದೇಶ ಒಳ್ಳೆಯ ಪ್ರವಾಸಿ ತಾಣದಂತೆ ಕಾಣುತ್ತಿದೆ. ಅಷ್ಟೇ ಅಲ್ಲ ಈ ಕೆರೆಗೆ ನೀರು ತುಂಬಿಸಲು 1 ಕೋಟಿ ವೆಚ್ಚ ಮಾಡಲು ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.