ಚಿಕ್ಕಬಳ್ಳಾಪುರ: ಪಿತ್ರಾರ್ಜಿತ ಆಸ್ತಿ ಹಂಚಿಕೆಯ ವಿವಾದದ ಹಿನ್ನಲೆ ಸೂಕ್ತ ಪರಿಹಾರ ಸಿಗದೇ ಹಿರಿಯ ಅಣ್ಣ ತನ್ನಷ್ಟಕ್ಕೆ ತಾನೇ ಚಾಕುವಿನಿಂದ ತಿವಿದುಕೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಜಿಲ್ಲೆಯ ಗೌರಿಬಿದನೂರು ನಗರದಲ್ಲಿ ನಡೆದಿದೆ.
ಜಗನ್ನಾಥ (63) ಹಿರಿಯ ಅಣ್ಣ ಚಾಕುವಿನಿಂದ ಇರಿದುಕೊಂಡ ವ್ಯಕ್ತಿ. ತಾಲೂಕಿನ ಗಂಗಸಂದ್ರ ಗ್ರಾಮದ ತೋಟದ ಮನೆಯಲ್ಲಿ ಲೇಟ್ ಸಿದ್ದಪ್ಪನವರ ಐದು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯ ಹಂಚಿಕೆಯ ವಿವಾದ ಸುಮಾರು ವರ್ಷಗಳಿಂದ ಸಾಕಷ್ಟು ತಗಾದೆಗಳಿಂದ ಕೂಡಿತ್ತು. ಆದರೆ, ಇಂದು ಅಣ್ಣ-ತಮ್ಮಂದಿರು ಸೇರಿ ಮಾತುಕತೆ ನಡೆಸಿ ಜಮೀನುಗಳ ವಿಭಾಗಗಳನ್ನು ರಿಜಿಸ್ಟರ್ ಮಾಡಿಸಲು ಗೌರಿಬಿದನೂರು ತಾಲೂಕು ಕಚೇರಿಗೆ ಹೋಗಿದ್ದಾರೆ. ಅಲ್ಲಿ ಸೂಕ್ತ ಪರಿಹಾರ ಸಿಗದ ಹಿನ್ನಲೆ ಅಣ್ಣ-ತಮ್ಮಂದಿರಿಗೆ ಮಾತಿಗೆ ಮಾತು ಬೆಳೆದಿದೆ.
ಇದನ್ನೂ ಓದಿ: ಫೇಸ್ಬುಕ್ನಲ್ಲಿ ಪರಿಚಯ, ನಂತರ ಪ್ರೇಮ; ಮದುವೆಯಾಗಿ 9 ತಿಂಗಳ ಬಳಿಕ ಕೈಕೊಟ್ಟ ಭೂಪ
ಈ ಸಂದರ್ಭ ಹಿರಿಯ ಅಣ್ಣ ಜಗನ್ನಾಥ್ ತಾಲೂಕು ಕಚೇರಿ ಆವರಣದಲ್ಲೇ ತನ್ನಷ್ಟಕ್ಕೆ ತಾನೇ ಚಾಕುವಿನಿಂದ ತನ್ನ ಹೊಟ್ಟೆಗೆ ತಿವಿದುಕೊಂಡಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ. ಇನ್ನು ಚಾಕುವಿನಿಂದ ತಿವಿದುಕೊಂಡ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಹೊಟ್ಟೆಯ ಭಾಗಕ್ಕೆ ನಾಲ್ಕೈದು ಭಾಗಗಳಲ್ಲಿ ಗಂಭೀರ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ರವಾನಿಸಿದ್ದಾರೆ.