ಬಾಗೇಪಲ್ಲಿ: ಈಟಿವಿ ಭಾರತ ಪ್ರಕಟಿಸಿದ ಸುದ್ದಿಯಿಂದ ಎಚ್ಚೆತ್ತ ಕಾರ್ಮಿಕ ಇಲಾಖೆ ಅಧಿಕಾರಿಗಳು ವಿವಿಧ ಕಲ್ಲು ಗಣಿಗಾರಿಕೆ ಕ್ವಾರಿಗಳ ಮೇಲೆ ದಾಳಿ ನಡೆಸಿದ್ದಾರೆ.
ಕಳೆದ ಆ.30 ರಂದು "ಅಪಾಯಕಾರಿ ಕಲ್ಲು ಕ್ವಾರಿಗಳಲ್ಲಿ ದುಡಿಯುತ್ತಿದ್ದಾರೆ ಶಂಕಿತ ಬಾಲ ಕಾರ್ಮಿಕರು?.!" ಎಂಬ ಶೀರ್ಷಿಕೆಯಡಿಯಲ್ಲಿ ತಾಲೂಕಿನ ಗೂಳೂರು ಹೋಬಳಿ, ಕೊತ್ತಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನಂಪಲ್ಲಿ ಹಾಗೂ ಮಾಡಪ್ಪಲ್ಲಿ ಸುತ್ತಮುತ್ತಲಿನ ಬೆಟ್ಟಗುಡ್ಡಗಳ ಪ್ರದೇಶಗಳಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯ ಕ್ವಾರಿಗಳಲ್ಲಿ ಶಂಕಿತ ಬಾಲ ಕಾರ್ಮಿಕರು ದುಡಿಯುತ್ತಿರುವ ಬಗ್ಗೆ ವಿಸ್ತೃತವಾದ ವರದಿ ಪ್ರಕಟವಾಗಿತ್ತು.
ಇದರಿಂದಾಗಿ ಎಚ್ಚೆತ್ತ ಕಾರ್ಮಿಕ ಇಲಾಖೆಯವರು ಇಂದು ಬಾಲ ಕಾರ್ಮಿಕ ಯೋಜನಾ ನಿರ್ದೇಶಕರಾದ ಬಿ.ಆರ್. ರಮೇಶ್, ಕಾರ್ಮಿಕ ನಿರೀಕ್ಷಕರಾದ ಕಿರಣ್ ಕುಮಾರ್ ಹಾಗೂ ಪೊಲೀಸ್ ಇಲಾಖೆಯ ವಿನೋದ್ ರವರ ನೇತೃತ್ವದಲ್ಲಿ ವಿವಿಧ ಕ್ವಾರಿಗಳ ಮೇಲೆ ದಾಳಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಯಾವುದೇ ಬಾಲ ಕಾರ್ಮಿಕ ಪ್ರಕರಣ ಕಂಡು ಬಂದಿಲ್ಲ ಎಂಬ ಮಾಹಿತಿ ಮೇಲ್ನೋಟಕ್ಕೆ ಲಭ್ಯವಾಗಿದೆ.
ಈ ವೇಳೆ ಕಾರ್ಮಿಕರ ಸಮಸ್ಯೆಗಳ ಬಗ್ಗೆಯೂ ಮಾಹಿತಿ ಪಡೆದ ಅಧಿಕಾರಿಗಳು ಕಾರ್ಮಿಕರ ಹಕ್ಕುಗಳ ಬಗ್ಗೆಯೂ ಅರಿವು ಮೂಡಿಸಿದ್ದಾರೆ.