ಗುಡಿಬಂಡೆ: ಗುಡಿಬಂಡೆ ತಾಲೂಕಿನ ಯರ್ಲಕ್ಕೇನಹಳ್ಳಿ ಗ್ರಾಮದಲ್ಲಿ ತಾಲೂಕು ಕರವೇ ಸಂಘಟನೆಯಿಂದ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಕರವೇ ಜಿಲ್ಲಾಧ್ಯಕ್ಷ ಶ್ರೀಧರ್ ಬಾಬು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ರಾಜ್ಯದ ಮುಕುಟಮಣಿಯಂತಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಒಂದು ಬದಿಗೆ ಆಂಧ್ರಪ್ರದೇಶ ಇದ್ದರೂ, ತನ್ನ ಕನ್ನಡದ ಕಂಪನ್ನು ಬಿಟ್ಟುಕೊಟ್ಟಿಲ್ಲ ಎಂದರು.
ರಾಜ್ಯ ಸರ್ಕಾರ ಕನ್ನಡ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಆಸಕ್ತಿ ತೋರಿಸದ ಕಾರಣ ಗಡಿಯಲ್ಲಿ ಕನ್ನಡದ ಸ್ಥಿತಿ ಸುಧಾರಣೆ ಕಂಡಿಲ್ಲ. ಚುನಾಯಿತ ಪ್ರತಿನಿಧಿಗಳು ನಾಡು, ನುಡಿಯ ವಿಷಯದಲ್ಲಿ ಗಂಭೀರವಾಗಿಲ್ಲ. ಮತ ಬ್ಯಾಂಕ್ ಗಟ್ಟಿಗೊಳಿಸುವುದೊಂದೇ ಅವರ ಗುರಿಯಾಗಿದೆ. ಜಿಲ್ಲೆಯಲ್ಲಿ ನಗರ ಸ್ಥಳೀಯ ಸಂಸ್ಥೆ ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳ ಅನೇಕ ಚುನಾಯಿತ ಪ್ರತಿನಿಧಿಗಳಿಗೆ ಸರಿಯಾಗಿ ಕನ್ನಡವೇ ಬರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರ ಎಸ್.ಮನು ಮಾತನಾಡಿ, ಇಂದಿಗೂ ಗಡಿಯಲ್ಲಿ ಮರಾಠಿ, ತೆಲುಗು, ಮಲಯಾಳಂ ಹಾಗೂ ತಮಿಳು ಭಾಷೆಯ ದಟ್ಟ ಪ್ರಭಾವ ಇದೆ. ಅನೇಕ ಸರ್ಕಾರಗಳು ಬಂದು ಹೋದರೂ ಗಡಿಯಲ್ಲಿ ಕನ್ನಡದ ಬೇರು ಗಟ್ಟಿಗೊಳಿಸುವ ಪ್ರಯತ್ನ ನಡೆದಿಲ್ಲ ಎಂದು ಆರೋಪಿಸಿದರು.
ಕಾರ್ಯಕ್ರಮದಲ್ಲಿ ಕರವೇ ಮಹಿಳಾ ಘಟಕದ ಅಧ್ಯಕ್ಷೆ ನರ್ಮದಾ ಮಾತನಾಡಿ, ಗಡಿಯಲ್ಲಿರುವ ಬಹುತೇಕ ಪ್ರಾಥಮಿಕ ಶಾಲೆಗಳಿಗೆ ಶಿಕ್ಷಕರು ನಿಯಮಿತವಾಗಿ ಬರುವುದೇ ಇಲ್ಲ. ಸರ್ಕಾರಿ ಶಾಲೆಯಲ್ಲೇ ಗುಣಮಟ್ಟದ ಶಿಕ್ಷಣವನ್ನು ನೀಡಲು ಸರ್ಕಾರ ಮುಂದಾಗಬೇಕು ಎಂದರು.