ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆ ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿದ್ದು,ಪ್ರತಿ ಕ್ಷೇತ್ರದಲ್ಲಿ ಗೆಲ್ಲುವ ಕುದುರೆಗೆ ಗಾಳ ಹಾಕಿರುವ ಪಕ್ಷಗಳು ಏನೇ ಆದರೂ ಗೆಲುವು ಸಾಧಿಸಿ ಅಧಿಕಾರಕ್ಕೆ ಬರಬೇಕು ಅಂತ ಪಣ ತೊಟ್ಟಿವೆ. ರಾಜ್ಯದಲ್ಲೂ ಕಾಂಗ್ರೆಸ್ ಬಿಜೆಪಿಗೆ ಪ್ರತಿಷ್ಠೆಯ ಕದನ ವಾಗಿದ್ದು, ಮೈತ್ರಿಪಕ್ಷಚುನಾವಣೆಯನ್ನು ಎದುರಿಸಲು ಸಜ್ಜಾಗಿದೆ.ಇತ್ತ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಮಾತ್ರ ಮೈತ್ರಿ ಸರ್ಕಾರದ ಪ್ಲಾನ್ ವರ್ಕೌಟ್ ಆಗುವ ಲಕ್ಷಣಗಳು ಕಾಣಿಸುತ್ತಿಲ್ಲ ಎನ್ನಲಾಗುತ್ತಿದೆ.
ಹೌದು, ರಾಜ್ಯದಲ್ಲಿ ಕೆಲವೊಂದು ಲೋಕಸಭಾ ಕ್ಷೇತ್ರಗಳು ಸಾಕಷ್ಟು ಪೈಪೋಟಿ ನೀಡಲು ಸಜ್ಜಾಗಿದ್ದು, ಯಾರು ಗೆಲ್ಲುತ್ತಾರೆ ಅನ್ನೋ ಕುತೂಹಲ ಸೃಷ್ಟಿಸಿವೆ. ಅದೇ ರೀತಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಕೂಡ ಸಾಕಷ್ಟು ಕುತೂಹಲ ಸೃಷ್ಟಿ ಮಾಡಿದ್ದು, ಪ್ರತಿ ದಿನ ಒಂದಲ್ಲ ಒಂದು ತಿರುವು ಪಡೆದುಕೊಳ್ಳುತ್ತಿದೆ.
ಇದರ ಜೊತೆ ನೇರ ಹಣಾಹಣಿ ಇರುವ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಮೊಯ್ಲಿ ವಿರುದ್ದ ಜೆಡಿಎಸ್ ಮುಖಂಡರು ಅಸಮಾಧಾನಗೊಂಡಿರುವುದು ಕಂಡುಬರುತ್ತಿದ್ದು, ಬಿಜೆಪಿ ಪರ ಕೆಲಸ ಮಾಡಲು ಜೆಡಿಎಸ್ ಮುಖಂಡರು ಮುಂದಾಗಿದ್ದಾರಾ ಎಂಬ ಅನುಮಾನ ಕಾಡುತ್ತಿದೆ. ಬಿಜೆಪಿ ಅಭ್ಯರ್ಥಿ ಬಚ್ಚೆಗೌಡ ಈ ಬಾರಿ ಗೆಲುವು ಸಾಧಿಸುತ್ತಾರೆ ಅನ್ನೋ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ. ಜೆಡಿಎಸ್ ಅಭ್ಯರ್ಥಿ ಇಲ್ಲದೇ ಇರುವುದು ಬಚ್ಚೆಗೌಡರಿಗೆ ಪ್ಲಸ್ ಪಾಯಿಂಟ್ ಆಗಿದ್ದು, ಗೌಡರು ಸೇರಿದಂತೆ ಒಕ್ಕಲಿಗ ಮತಗಳು ಬಚ್ಚೆಗೌಡರಿಗೆ ಬೀಳಲಿವೆ ಅನ್ನೋದು ಇಲ್ಲಿನ ಕ್ಷೇತ್ರದ ಸಾರ್ವಜನಿಕರ ಮಾತಾಗಿದೆ.
ಮತ್ತೊಂದು ಕಡೆ ಕಾಂಗ್ರೆಸ್ ಅಭ್ಯರ್ಥಿಗೆ ಜೆಡಿಎಸ್ ಕಾರ್ಯಕರ್ತರು ಮತ್ತು ಮುಖಂಡರು ಸಪೋರ್ಟ್ ಮಾಡುವುದಿಲ್ಲ ಅನ್ನೋ ಮಾತುಗಳು ಕೇಳಿ ಬರುತ್ತಿದ್ದು, ಇವರೆಲ್ಲಾ ಈ ಸಲ ಬಿಜೆಪಿ ಅಭ್ಯರ್ಥಿ ಪರವಾಗಿ ಕೆಲಸ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಹಲವು ಬಾರಿ ವೀರಪ್ಪ ಮೊಯ್ಲಿ ವಿರುದ್ಧ ಸ್ಥಳೀಯ ಜೆಡಿಎಸ್ ಮುಖಂಡರು ಅಸಮಾಧಾನವನ್ನು ಹೊರಹಾಕಿರುವುದು ಇದಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ. ಅಲ್ಲದೇ ಜೆಡಿಎಸ್ನ ತಾಲೂಕು ಮತ್ತು ಹೋಬಳಿ ಮಟ್ಟದ ಮುಖಂಡರು ಮತ್ತು ಕಾರ್ಯಕರ್ತರು ಗೌಪ್ಯವಾಗಿ ಮೀಟಿಂಗ್ ನಡೆಸಿ ಈ ಸಲ ಬಿಜೆಪಿ ಪರ ಕೆಲಸ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.
ಇದಕ್ಕೆ ಕಾರಣವಾಯ್ತ ನಿಸರ್ಗ ನಾರಾಯಣಸ್ವಾಮಿ ನಡೆ!
ಹಾಲಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಜೆಡಿಎಸ್ ಮುಖಂಡರು ಮತ್ತು ಮಾಜಿ ಶಾಸಕನನ್ನು ಕಡೆಗಣಿಸಿದ್ದಾರೆ ಎನ್ನಲಾಗಿದ್ದು, ಬಹಿರಂಗವಾಗಿ ಮಾಜಿ ಶಾಸಕ ಪಿಳ್ಳ ಮಿನಿಶ್ಯಾಮಪ್ಪ ವಿರುದ್ದ ಪಕ್ಷ ದ್ರೋಹಿ ಎಂದು ಹೇಳುವ ಮೂಲಕ ಆರೋಪಗಳ ಪಟ್ಟಿ ಮಾಡಿದ್ದಾರೆ. ಇದರಿಂದ ಜೆಡಿಎಸ್ನಲ್ಲಿ ಭಿನ್ನಮತ ಸ್ಫೋಟಗೊಂಡಿತ್ತು. ಇದೀಗ ಚುನಾವಣೆಯ ಸಂದರ್ಭದಲ್ಲಿ ಮತ್ತಷ್ಟು ಅಸಮಾಧಾನ ಭುಗಿಲೆದ್ದಿದೆ. ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಪರ್ಧೆ ಮಾಡಿದರು ಅವರ ಪರ ಯಾವತ್ತೂ ಪ್ರಚಾರಕ್ಕೆ ಬಂದಿಲ್ಲ. ಅಲ್ಲದೇ ಕ್ಷೇತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿಲ್ಲ. ಇದರಿಂದ ಜೆಡಿಎಸ್ನ ಗ್ರಾಮ ಮತ್ತು ತಾಲೂಕು ಮಟ್ಟದ ಮುಖಂಡರು ಮತ್ತು ಕಾರ್ಯಕರ್ತರು ಬಿಜೆಪಿಗೆ ಬೆಂಬಲ ನೀಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ವೀರಪ್ಪಮೊಯ್ಲಿ ಮಗ, ಹರ್ಷ ತಾಲೂಕು ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಸಿದರೆ, ಇತ್ತ ಬಿಜೆಪಿ ಪರ ಜಿಲ್ಲಾ ಅಧ್ಯಕ್ಷ ರಾಜಣ್ಣ ಮನೆ ಮನೆ ಪ್ರಚಾರ ಮಾಡುತ್ತಿದ್ದಾರೆ. ಇದನ್ನು ಬಿಟ್ಟರೆ ಬೇರೆ ಯಾವ ಅಭ್ಯರ್ಥಿಗಳು ಕೂಡ ಪ್ರಚಾರಕ್ಕೆ ಇನ್ನು ಧುಮುಕಿಲ್ಲ. ವೀರಪ್ಪಮೊಯ್ಲಿ ಡೆಲ್ಲಿ ಪ್ರವಾಸದಲ್ಲಿದ್ದರೆ ಇತ್ತ ಬಚ್ಚೆಗೌಡರು ದೇವಸ್ಥಾನ ಹಾಗೂ ಮಠಗಳು ಅಂತ ಸುತ್ತುತ್ತಿದ್ದಾರೆ.
ಒಟ್ಟಿನಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ದಿನಕ್ಕೊಂದು ತಿರುವು ಪಡದುಕೊಳ್ಳುತ್ತಿದ್ದು, ಚುನಾವಣೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಅಭ್ಯರ್ಥಿಗಳ ಸೋಲು ಗೆಲುವುಗಳ ಲೆಕ್ಕಾಚಾರವನ್ನು ಹಾಕಲು ಜನರು ಶುರುಮಾಡಿದ್ದಾರೆ. ಇದರಲ್ಲಿ ಯಾರು ಗೆಲ್ಲುತ್ತಾರೆ ಅಂತ ರಿಸಲ್ಟ್ ಬಂದ ಮೇಲೆ ಗೊತ್ತಾಗುತ್ತದೆ.