ಚಿಕ್ಕಬಳ್ಳಾಪುರ: ವಾಹನ ತಪಾಸಣೆ ವೇಳೆ ಪರಾರಿಯಾಗಲು ಯತ್ನಿಸಿದ ಅಂತರ್‌ರಾಜ್ಯ ದ್ವಿಚಕ್ರ ವಾಹನ ಕಳ್ಳನನ್ನು ಜಿಲ್ಲೆಯ ಗೌರಿಬಿದನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂಧಿಸಲಾಗಿದೆ.
ಆಂಧ್ರ ಪ್ರದೇಶದ ಹಿಂದೂಪುರ ನಗರದ ನಿವಾಸಿ ನವೀನ್ (28) ಬಂಧಿತ ಆರೋಪಿ. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೈಗಾರಿಕಾ ಪ್ರದೇಶ ಕುಡುಮಲಕುಂಟೆಯಲ್ಲಿ ಗ್ರಾಮಾಂತರ ಠಾಣೆಯ ಪಿಎಸ್ಐ ಮೋಹನ್ ಕುಮಾರ್ ವಾಹನ ತಪಾಸಣೆ ಮಾಡುವ ವೇಳೆ ಆರೋಪಿ ನವೀನ್ ದ್ವಿಚಕ್ರ ವಾಹನವನ್ನು ತಳ್ಳಿಕೊಂಡು ಬರುತ್ತಿದ್ದ. ಆತನನ್ನು ಅಡ್ಡಗಟ್ಟಿದ ಪೊಲೀಸರು ದಾಖಲೆ ಕೇಳಿದಾಗ ಪರಾರಿಯಾಗಲು ಯತ್ನಿಸಿದ್ದ. ಈ ವೇಳೆ ಬಂಧಿಸಲಾಗಿದೆ.
ಇದನ್ನೂ ಓದಿ: ಮಂಗಳೂರು : ದರೋಡೆ ನಾಟಕವಾಡಿ ಸಿಕ್ಕಿಬಿದ್ದ ಹವಾಲ ದಂಧೆಕೋರರು
ಬಂಧಿತನನ್ನು ಠಾಣೆಗೆ ಕರೆದೊಯ್ದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ಆತ ದ್ವಿಚಕ್ರ ವಾಹನ ಕಳುವು ಮಾಡುತ್ತಿದ್ದ ಬಗ್ಗೆ ಬಾಯ್ಬಿಟ್ಟಿದ್ದಾನೆ. ಅಲ್ಲದೆ, ಇದೇ ತಿಂಗಳ 19 ರಂದು ತಾಲೂಕಿನ ವಾಟದಹೊಸಳ್ಳಿ ಗ್ರಾಮದ ಪಾರ್ವತಮ್ಮ ಎಂಬವರ 40 ಗ್ರಾಂ. ತೂಕದ ಸರಗಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಬಂಧಿತನಿಂದ 40 ಗ್ರಾಂ. ತೂಕದ ಚಿನ್ನದ ಸರ ಹಾಗೂ 6 ಲಕ್ಷ ರೂ. ಮೌಲ್ಯದ 10 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.
ಗೌರಿಬಿದನೂರು ವೃತ್ತ ನಿರೀಕ್ಷಕ ಶಶಿಧರ್ ಹಾಗೂ ಅಪರಾಧ ವಿಭಾಗದ ಅಶ್ವತ್ಥ್ ಸಿಬ್ಬಂದಿ ರಿಜ್ವಾನ್, ಶ್ರೀನಿವಾಸ್ ರೆಡ್ಡಿ, ಅಶ್ವತ್ಥ, ಮುರುಳಿ, ರವಿಕುಮಾರ್, ಲೋಹಿತ, ಗುರು, ಹಾಗೂ ಚಾಲಕ ಮಹೇಶ್ ರಾಜಶೇಖರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.