ಚಿಕ್ಕಬಳ್ಳಾಪುರ: ನಗರದಲ್ಲಿ ಕೊರೊನಾ ಸೋಂಕಿತರ ಹೆಚ್ಚಳ ಹಿನ್ನಲೆ ನಗರದ ಎಲ್ಲ ವಾರ್ಡ್‌ಗಳನ್ನು ಸೀಲ್ಡೌನ್ ಮಾಡುವಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಕಳೆದ ದಿನವಷ್ಟೇ ಕೊರೊನಾ ಸೋಂಕಿನಿಂದ 17 ವಾರ್ಡ್ನ ವೃದ್ದ ಮೃತಪಟ್ಟದ್ದು, ಆತನ ಮಗ ಸೇರಿದಂತೆ ಕೆಲವರನ್ನು ಹೋಂ ಕಾರಂಟೈನ್ ಮಾಡಲಾಗಿತ್ತು. ಸದ್ಯ ಇಂದು ಮೃತ ವೃದ್ಧನ ಮೂವರು ಸಂಬಂಧಿಕರಲ್ಲಿಯೂ ಸೋಂಕು ಧೃಡಪಟ್ಟಿದ್ದು, ಚಿಕ್ಕಬಳ್ಳಾಪುರ ನಗರವನ್ನು ಸಂಪೂರ್ಣ ಸೀಲ್ಡೌನ್ ಮಾಡಲು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಇನ್ನೂ ಜಿಲ್ಲೆಯ ಗೌರಿಬಿದನೂರು ನಗರ ಹಾಟ್ಸ್ಪಾಟ್ ಆಗಿತ್ತು. ಚಿಕ್ಕಬಳ್ಳಾಪುರ ನಗರದ 17 ವಾರ್ಡ್ನಲ್ಲಿ ಸೋಂಕು ಪತ್ತೆಯಾದ ಹಿನ್ನೆಲೆ ಸುತ್ತಮುತ್ತಲಿನ ವಾರ್ಡ್‌ಗಳನ್ನು ಮಾತ್ರ ಸೀಲ್ಡೌನ್ ಮಾಡಲಾಗಿತ್ತು. ಇಂದು ಮತ್ತೆ ಕೊರೊನಾ ಸೋಂಕಿತರು ಪತ್ತೆಯಾಗಿರುವುದರಿಂದ ನಗರದ ಎಲ್ಲಾ ವಾರ್ಡ್‌ಗಳನ್ನು ಸಂಪೂರ್ಣ ಸೀಲ್ಡೌನ್ ಮಾಡಲಾಗಿದೆ. ನಗರ ಜನತೆ ತರಕಾರಿ ಸೇರಿ ಮೂಲಭೂತ ವಸ್ತುಗಳ ಖರೀದಿಗೂ ಬ್ರೇಕ್ ಬಿದ್ದಂತಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 16 ಕ್ಕೆ ಏರಿಕೆಯಾಗಿದ್ದು, ಇಬ್ಬರು ಮೃತಪಟ್ಟಿದ್ದು, 8 ಜನ ಗುಣಮುಖರಾಗಿದ್ದಾರೆ. ಇನ್ನೂ 6 ಜನ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.