ಬಾಗೇಪಲ್ಲಿ: ತಾಲೂಕಿನ ಗೂಳೂರು ಹೋಬಳಿಯ ಮಾರಗಾನಕುಂಟೆ ಗ್ರಾಮದಲ್ಲಿನ ವ್ಯಕ್ತಿಯೋರ್ವ ತನ್ನ ಮನೆ ಹಿಂಭಾಗದ ಕುರಿ ಕೊಟ್ಟಿಗೆಯಲ್ಲಿ ಗಾಂಜಾ ಸಸ್ಯಗಳನ್ನು ಬೆಳೆದ ಪರಿಣಾಮ ಇದೀಗ ಪೊಲೀಸರ ವಶದಲ್ಲಿದ್ದಾನೆ.
ಕೊರೊನಾ ರಾಜ್ಯಕ್ಕೆ ವಕ್ಕರಿಸಿದಾಗಿನಿಂದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಗಾಂಜಾ ನಶೆಯ ಬಗ್ಗೆ ಹೆಚ್ಚು ಕೇಳುತ್ತಿದ್ದೇವೆ. ಬಾಗೇಪಲ್ಲಿ ತಾಲೂಕಿನಾದ್ಯಂತ
ಇತ್ತೀಚೆಗೆ ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಕುರಿತು ಸರ್ಕಾರವೇ ಬೆಚ್ಚಿಬೀಳುವಂತಹ ಪ್ರಕರಣಗಳನ್ನು ಬೆಳಕಿಗೆ ತರುತ್ತಿದೆ. ಅದೇ ರೀತಿಯಲ್ಲಿ ತಾಲ್ಲೂಕಿನ ಗೂಳೂರು ಹೋಬಳಿಯ ಮಾರಗಾನಕುಂಟೆ ಗ್ರಾಮದಲ್ಲಿ ಮತ್ತೊಂದು ಕೇಸ್ ಬಯಲಾಗಿದೆ.
ಗಾಂಜಾ ಬೆಳೆಯ ಕುರಿತ ಖಚಿತ ಮಾಹಿತಿ ಮೇರೆಗೆ ಡಿವೈಎಸ್ಪಿ ರವಿಶಂಕರ್ ಅವರ ಮಾರ್ಗದರ್ಶನದಲ್ಲಿ ಬಾಗೇಪಲ್ಲಿ ವೃತ ನಿರೀಕ್ಷಕ ನಯಾಜ್ ಬೇಗ್, ಉಪ ನಿರೀಕ್ಷಕ ಸುನೀಲ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಿ 10 ಕೆಜಿಯಷ್ಟು ಅಕ್ರಮ ಗಾಂಜಾ ವಶಪಡಿಸಿಕೊಂಡ ತರುವಾಯ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ತಾಲ್ಲೂಕು ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.