ಬಾಗೇಪಲ್ಲಿ: ನೆರೆಯ ಆಂಧ್ರಪ್ರದೇಶ ಸರ್ಕಾರವು ಮದ್ಯ ಮಾರಾಟವನ್ನು ನಿಷೇಧಿಸಿರುವುದರಿಂದಾಗಿ ತಾಲೂಕಿನ ಕೊತ್ತಕೋಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಡಿ ಗ್ರಾಮಮಗಳಲ್ಲಿ ಕೊರೊನಾಗಿಂತ ಹೆಚ್ಚು ಆತಂಕ ಮದ್ಯ ವ್ಯಸನಿಗಳಿಂದ ಕಾಡ ತೊಡಗಿದೆ.
ಕೊರೊನಾ ಸೋಂಕು ಹರಡುವ ಭೀತಿಯಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಹಾಗೂ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಜನಜಂಗುಳಿಯಾಗುವ ವ್ಯಾಪಾರವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಆದರೆ ಇದನ್ನೇ ಬಂಡವಾಳವನ್ನಾಗಿಸಿಕೊಳ್ಳುವ ಕೆಲ ಅಕ್ರಮ ಮದ್ಯ ಮಾರಾಟ ದಂಧೆಕೋರರು ಕೊರೊನಾ ಆತಂಕವನ್ನು ಲೆಕ್ಕಿಸದೆ ಸಂಪಾದನೆಯ ದಾರಿ ಹಿಡಿದಿದ್ದಾರೆ.
ಮುಮ್ಮಡಿವಾರಪಲ್ಲಿ, ಕೊತ್ತಕೋಟೆ, ಕೊಲಿಂಪಲ್ಲಿ ಗ್ರಾಮಗಳು ಆಂಧ್ರಪ್ರದೇಶದ ಗಡಿಗೆ ಅಂಟಿಕೊಂಡಿರುವ ಗ್ರಾಮಗಳಾಗಿದ್ದು, ಇಲ್ಲಿಗೆ ಆಂಧ್ರಪ್ರದೇಶದ ಗೋರಂಟ್ಲ, ಪುಟ್ಟಪರ್ತಿಯ ಕಡೆಯಿಂದ ನೂರಾರು ಮದ್ಯವ್ಯಸನಿಗಳು ಹಗಲು ರಾತ್ರಿಯನ್ನದೆ ಬರುತ್ತಾರೆ. ಈ ಗ್ರಾಮಗಳು ಎರಡೂ ರಾಜ್ಯಗಳ ಗ್ರಾಮೀಣ ಭಾಗದ ಮದ್ಯ ವ್ಯಸನಿಗಳ ಅಡ್ಡಗಳಾಗಿವೆ. ಇದನ್ನು ತಡೆಯುವ ಕೆಲಸ ಮಾಡಬೇಕಾದ ಅಬಕಾರಿ ಇಲಾಖೆಯು ನಿದ್ರಾವಸ್ಥೆಗೆ ಜಾರಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಅಷ್ಟೇ ಅಲ್ಲದೆ ಈ ಅಕ್ರಮ ಮದ್ಯ ಮಾರಾಟ ದಂಧೆಯಲ್ಲಿ ಶಾಲಾ ಮಕ್ಕಳನ್ನು ಸಕ್ರಿಯಗೊಳಿಸಲಾಗಿದ್ದು, ಮಕ್ಕಳ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಇಂತಹ ಕೃತ್ಯಗಳಿಂದಾಗಿ ಸಮಾಜದ ಸ್ವಾಸ್ಥ್ಯಕ್ಕೂ ಧಕ್ಕೆಯಾಗಲಿದೆ ಎಂದು ಐವಾರಪಲ್ಲಿ ಹರೀಶ್ ತಿಳಿಸಿದರು.
ಕೊತ್ತಕೋಟೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಾಜಕಾರಣಿಗಳ ಬೆಂಬಲದಿಂದಲೇ ಅಕ್ರಮ ಮದ್ಯಮಾರಾಟ ಜೋರಾಗಿರುವುದು ದುರಂತ. ಇನ್ನಾದರೂ ಇದರ ವಿರುದ್ಧ ಅಬಕಾರಿ ಇಲಾಖೆ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕೆಂದು ಜನರು ಆಗ್ರಹಿಸಿದ್ದಾರೆ.