ಚಿಕ್ಕಬಳ್ಳಾಪುರ: ಸರ್ಕಾರದ ಕಟ್ಟುನಿಟ್ಟಿನ ಆದೇಶದ ನಡುವೆಯೂ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದು ಜಿಲ್ಲೆಯ ಚಿಂತಾಮಣಿ ತಾಲೂಕು ವ್ಯಾಪ್ತಿಯಲ್ಲಿ ಕಂಡು ಬಂದಿದೆ.
ಚಿಂತಾಮಣಿ ತಾಲೂಕಿನ ಕಾಗತಿ ಪಂಚಾಯತಿ ವ್ಯಾಪ್ತಿಯ ಕೃಷ್ಣರಾಜಪುರದಲ್ಲಿ ಪ್ರತಿನಿತ್ಯ ಮುಂಜಾನೆ ಅಕ್ರಮ ಮದ್ಯ ಮಾರಾಟ ನಡೆಸುತ್ತಿದೆ ಎನ್ನಲಾಗಿದೆ. ಗ್ರಾಮದಲ್ಲಿನ ಚಿಲ್ಲರೆ ಅಂಗಡಿಗಳಲ್ಲಿ ಮದ್ಯ ಮಾರಟ ನಡೆಯುತ್ತಿದ್ದರೂ ಅಬಕಾರಿ ಅಧಿಕಾರಿಗಳು ಮಾತ್ರ ನಮಗೇನು ಗೊತ್ತಿಲ್ಲ ಎಂಬಂತೆ ಸುಮ್ಮನೆ ಕುಳಿತಿದ್ದು, ಇದಕ್ಕೆ ಸಾಥ್ ನೀಡುತ್ತಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮದಲ್ಲಿ ಮುಂಜಾನೆಯೇ ಅಂಗಡಿ ತಗೆಯುವುದರಿಂದ ಕುಡುಕರ ಹಾವಳಿಯೂ ದಿನೇ ದಿನೇ ಹೆಚ್ಚಾಗುತ್ತಿದ್ದು, ಯುವ ಸಮೂಹ ಸೇರಿದಂತೆ ವಿದ್ಯಾರ್ಥಿಗಳೂ ಸಹ ಕುಡಿತಕ್ಕೆ ಒಳಗಾಗುತ್ತಿದ್ದಾರೆ. ಇವುಗಳಿಗೆಲ್ಲ ಸಾಕ್ಷಿ ಎಂಬಂತೆ ಗ್ರಾಮದ ಬೀದಿ ಬೀದಿಗಳಲ್ಲಿ ಎಸೆದಿರುವ ಮದ್ಯದ ಬಾಟಲಿಗಳು ಎದ್ದು ಕಾಣುತ್ತಿವೆ. ಈ ಬಗ್ಗೆ ಇದುವರೆಗೆ ನಾಲ್ಕು ಬಾರಿ ಅಬಕಾರಿ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಷ್ಟೇ ಅಲ್ಲದೇ ಮೂಟೆಗಳಲ್ಲಿ ಮದ್ಯ ರವಾನೆಯಾಗುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.