ಚಿಕ್ಕಬಳ್ಳಾಪುರ: ಎಸಿಬಿ ಬಗ್ಗೆ ಹೈಕೋರ್ಟ್ ತೀರ್ಪನ್ನು ಎಲ್ಲರೂ ಗೌರವಿಸಬೇಕು. ಆದರೆ, ತೀರ್ಪೇನು ಎಂಬ ಬಗ್ಗೆ ಸಂಪೂರ್ಣ ಮಾಹಿತಿ ನನಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.
ಎಸಿಬಿ ರದ್ಧತಿ ಬಗ್ಗೆ ಹೈಕೋರ್ಟ್ ಆದೇಶದ ಕುರಿತಾಗಿ ಜಿಲ್ಲೆಯ ಗೌರಿಬಿದನೂರಿನಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಎಸಿಬಿ ಕರ್ನಾಟಕ ರಾಜ್ಯದಲ್ಲಿ ಮಾತ್ರವಲ್ಲ, ಎಲ್ಲ ರಾಜ್ಯಗಳಲ್ಲಿಯೂ ಇದೆ. ಪೊಲೀಸ್ ಇಲಾಖೆಯನ್ನು ಬೇರ್ಪಡಿಸಿ ಎಸಿಬಿ ಮಾಡಲಾಗಿತ್ತು. ಇದು ಲೋಕಾಯುಕ್ತಕ್ಕೆ ಮರುಜೀವ ಕೊಡಲು ಎನ್ನಲು ಸಾಧ್ಯವಿಲ್ಲ. ಹೈಕೋರ್ಟ್ ಆದೇಶವನ್ನು ಸಂಪೂರ್ಣವಾಗಿ ನೋಡಿದ ಬಳಿಕ ಹೆಚ್ಚಿನ ಪ್ರತಿಕ್ರಿಯೆ ನೀಡುವೆ ಎಂದರು.
ಸಚಿವ ಆರ್.ಅಶೋಕ್ ಮುಖ್ಯಮಂತ್ರಿ ಆಗುವ ಪ್ರಯತ್ನ ಮಾಡಿದ್ದರು. ಆದರೆ, ಅದು ಸಿಗಲಿಲ್ಲ. ಹೀಗಾಗಿ ಕಾಂಗ್ರೆಸ್ ಬಗ್ಗೆ ಮಾತನಾಡುತ್ತಾರೆ. ಸುಧಾಕರ್ಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿದ್ದು ನಾನು. ಅವನನ್ನು ಬಾಯಿಮುಚ್ಚಿಕೊಂಡು ಸುಮ್ಮನಿರಲು ಹೇಳಿ. ಇಲ್ಲವಾದ್ರೆ ಅವನದನ್ನೆಲ್ಲ ಬಯಲಿಗಿಡಬೇಕಾಗುತ್ತದೆ ಎಂದು ಎಚ್ಚರಿದರು.
ಕಾಂಗ್ರೆಸ್ ಹಿರಿಯ ಮುಖಂಡ ಕೆ.ಹೆಚ್.ಮುನಿಯಪ್ಪ ಹೆಚ್ಚು ಕಾಂಗ್ರೆಸ್ ಪಕ್ಷದಲ್ಲಿ ಕಾಣಿಸಿಕೊಳ್ಳದ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜಕೀಯದಲ್ಲಿ ಯಾವಾಗಲೂ ಕೂಡ ಒಂದೇ ಅಭಿಪ್ರಾಯ ಇರಲ್ಲ. ಎಲ್ಲಾ ಸರಿಹೋಗುತ್ತದೆ ಎಂದು ಹೇಳಿದರು.
ಬೆಂಗಳೂರಿನ ಚಾಮರಾಜಪೇಟೆ ಮೈದಾನ ವಿವಾದದ ಬಗ್ಗೆ ನನಗೆ ಗೊತ್ತಿಲ್ಲ. ಗೊತ್ತಿಲ್ಲದ ವಿಷಯದ ಬಗ್ಗೆ ಮಾತನಾಡಬಾರದು. ಆದರೆ, ಹಿಂದೂ-ಮುಸ್ಲಿಮರಲ್ಲಿ ದ್ವೇಷ ತರಿಸುವಂತೆ ಮಾಡಬಾರದು. ಎಲ್ಲರೂ ಒಂದೇ ತಾಯಿ ಮಕ್ಕಳಂತಿರಬೇಕು. ವಿವಾದಗಳನ್ನು ಹುಟ್ಟು ಹಾಕಿ ಬೆಂಕಿ ಹಚ್ಚುವುದೇ ಬಿಜೆಪಿ ಕೆಲಸ ಎಂದು ದೂರಿದರು.
ಇದನ್ನೂ ಓದಿ: ಎಸಿಬಿ ರಚನೆ ರದ್ದುಪಡಿಸಿ ಹೈಕೋರ್ಟ್ ಆದೇಶ