ಚಿಕ್ಕಬಳ್ಳಾಪುರ : ಮನೆ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಚಿನ್ನದ ಸರ ಕದ್ದಿರುವುದಾಗಿ ಮನೆ ಮಾಲೀಕರು ಆರೋಪ ಮಾಡಿದ್ದರು. ಈ ಹಿನ್ನೆಲೆ ಕೇಸ್ ದಾಖಲಾಗದಿದ್ದರೂ ಪೊಲೀಸರು ತನಿಖೆಯಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯ ಪತಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಜಿಲ್ಲೆಯ ಶಿಡ್ಲಘಟ್ಟ ನಗರದ ಪ್ರಮೀಳಾ ಎಂಬಾಕೆ ವಾಸವಿ ರಸ್ತೆಯಲ್ಲಿನ ಲಕ್ಷ್ಮಿ ಮೆಡಿಕಲ್ಸ್ ಸ್ಟೋರ್ ಮಾಲೀಕ ಬಾಬು ಎಂಬುವರ ಮನೆಯಲ್ಲಿ ಹಲವು ದಿನಗಳಿಂದ ಮನೆಗೆಲಸ ಮಾಡುತ್ತಿದ್ದರು. ಆದರೆ, ಕೆಲ ದಿನಗಳ ಹಿಂದೆ ಶಾಲೆ ಪ್ರಾರಂಭವಾದ ಹಿನ್ನೆಲೆ ಮಕ್ಕಳನ್ನು ನೋಡಿಕೊಳ್ಳಲು ಸಮಯದ ಕೊರತೆಯಿಂದ ಮನೆಗೆಲಸಕ್ಕೆ ಹೋಗುವುದನ್ನು ಬಿಟ್ಟಿದ್ದರು.
ಮಹಿಳೆ ಕೆಲಸ ಬಿಟ್ಟ ಹತ್ತು ದಿನಗಳ ನಂತರ ಮನೆ ಮಾಲೀಕ ಬಾಬು ಅವರು ಪ್ರಮೀಳಾ ಮೇಲೆ ಚಿನ್ನದ ಸರ ಕದ್ದಿರುವ ಆರೋಪ ಮಾಡಿ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಳ್ಳದೆ ಪೊಲೀಸರು ಕೇವಲ ಮೌಖಿಕ ದೂರಿನ ಆಧಾರದ ಮೇಲೆ ಪ್ರಮೀಳಾ ಹಾಗೂ ಆಕೆಯ ಪತಿ ಉದಯ್ ಎಂಬುವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದರು.
ಅನೇಕ ಬಾರಿ ಮಾಲೀಕ ಬಾಬು, ಉದಯ್ಗೆ ಬೆದರಿಕೆ ಹಾಕಿದ್ದರಂತೆ. ಕದ್ದಿರುವ ಚಿನ್ನದ ಸರ ತಂದುಕೊಂಡು ಇಲ್ಲವಾದರೆ ಹಣವನ್ನಾದರೂ ಕಟ್ಟಿಕೊಡು ಎಂದು ಒತ್ತಡ ಹಾಕಿದ್ದಾರೆ. ಅಷ್ಟೇ ಅಲ್ಲದೆ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಎಸ್ಐ ಪದ್ಮಾವತಿಯವರು ಪ್ರತಿ ತಿಂಗಳು 10 ಸಾವಿರ ರೂ. ಕೊಟ್ಟು ಕ್ಲಿಯರ್ ಮಾಡಿಕೋ, ಇಲ್ಲವಾದರೆ ಕಳ್ಳತನದ ಕೇಸ್ ಹಾಕಿ ಜೈಲಿಗೆ ಹಾಕ್ತೀನಿ ಅಂತಾ ಬೇದರಿಕೆ ಹಾಕಿದ್ದರು ಎಂದು ಮನೆಕೆಲಸ ಮಾಡುತ್ತಿದ್ದ ಮಹಿಳೆ ಹಾಗೂ ಆಕೆಯ ಪತಿ ಆರೋಪಿಸಿದ್ದಾರೆ.
ಇದರಿಂದ ಹೆದರಿ ಉದಯ್ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅಸ್ವಸ್ಥಗೊಂಡ ಅವರಿಗೆ ಶಿಡ್ಲಘಟ್ಟ,ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿ ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ವೇಳೆ ಮಾಧ್ಯಮದವರಿಗೆ ಪ್ರತಿಕ್ರಿಯೆ ಕೊಟ್ಟಿದ್ದರು.
ಆದರೆ, ಆರೋಗ್ಯ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡ ಹಿನ್ನೆಲೆ ವ್ಯಕ್ತಿಯನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಸಾವನ್ನಪ್ಪಿದ್ದಾರೆ. ಮೃತದೇಹ ಬೆಂಗಳೂರಿಂದ ಶಿಡ್ಲಘಟ್ಟಕ್ಕೆ ಬರುತ್ತಿದ್ದಂತೆ ಪೊಲೀಸ್ ಠಾಣೆ ಮುಂದಿಟ್ಟು ಪ್ರತಿಭಟನೆಗೆ ನಡೆಸಲು ಹಲವು ಸಂಘಟನೆಗಳು ಸಜ್ಜಾಗಿವೆ.